ಮಡಿಕೇರಿ, ಜ. 24: ಕೊಡಗಿನ ಇಬ್ಬರು ಶಾಸಕರುಗಳು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಬಿ.ಜೆ.ಪಿ. ಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಇವರುಗಳು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧಿ ಸುವದು ಖಚಿತಗೊಂಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಇದನ್ನು ಖಾತರಿಪಡಿಸಿದ್ದಾರೆ. ಮಡಿಕೇರಿಯಲ್ಲಿ ಬಿ.ಜೆ.ಪಿ.ಯಿಂದ ಏರ್ಪಟ್ಟಿದ್ದ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಅದಕ್ಕೂ ಮುನ್ನ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೊಡಗಿನಲ್ಲಿ ಪಕ್ಷದ ಕೆಲವು ಭಿನ್ನಮತೀಯರ ಸಭೆ ನಡೆದಿದ್ದ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದರು. ಕೊಡಗಿನ ಇಬ್ಬರು ಶಾಸಕರುಗಳೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಮತ್ತೆ ಅವರಿಗೇ ಟಿಕೆಟ್ ನೀಡಲಾಗುವದು ಎಂದು ಖಾತರಿ ಪಡಿಸಿದರು. ಒಂದು ಕ್ಷೇತ್ರದಲ್ಲಿ 3 ಬಾರಿ ಆಯ್ಕೆಯಾದವರನ್ನು ಆ ಕ್ಷೇತ್ರಗಳಿಂದ ಬದಲಿಸಿ ಬೇರೆ ಕ್ಷೇತ್ರಗಳಲ್ಲಿ ಟಿಕೆÀಟ್ ನೀಡಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಯಸಿದ್ದಾರೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳÀಲ್ಲಿ ವರದಿ ಪ್ರಸಾರವಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಂತಹ ಯಾವದೇ ನಿರ್ಧಾರಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿಯೂ ಯಡಿಯೂರಪ್ಪ ಅವರು ಹಾಲಿ ಶಾಸಕರಿಗೆ ಅವಕಾಶ ನೀಡಲಿರುವದನ್ನು ಮತ್ತೆ ಖಚಿತಪಡಿಸಿದರು.” ನಾವು ಕೊಡಗಿನ ಈ ಎರಡು ಕ್ಷೇತ್ರಗಳನ್ನು ಗೆದ್ದಂತೆಯೇ ಆಗಿದೆ” ಎಂದು ವಿಶ್ವ್ವಾಸ ವ್ಯಕ್ತÀಪಡಿಸಿದ ಯಡಿಯೂರಪ್ಪ ಅವರು ಕೊಡಗಿನ ಕಾರ್ಯಕರ್ತರು ನೆÀರೆಯ ಪಿರಿಯಾಪಟ್ಟಣ ಮತ್ತು ಅರಕಲಗೋಡುಗಳಿಗೆ ತೆರಳಿ ಅಲ್ಲಿನ ಬಿ.ಜೆ.ಪಿ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಲಿ ಎಂದು ಸಲಹೆಯಿತ್ತರು.

ಬಂದ್‍ಗೆ ಪ್ರತಿ ಬಂದ್

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ದಿನ ಆಯಾ ಜಿಲ್ಲೆಗಳಲ್ಲಿ ಬಿ.ಜೆ.ಪಿಯಿಂದ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಯಡಿಯೂರಪ್ಪ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ತಾ. 25 ರಂದು (ಇಂದು) ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ. ಈ ದಿನವೇ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೈಸೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಸಮಾರೋಪ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಧಕ್ಕೆಯುಂಟು ಮಾಡುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ದಿನವೇ ಬಂದ್ ನಡೆಸಲು ಷಡ್ಯಂತ್ರ ರೂಪಿಸಿದ್ದಾರೆ. ಅಲ್ಲದೆ. ಮುಂದಿನ ಫೆಬ್ರವರಿ 4 ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು ಮತ್ತೆ ಅದೇ ದಿನ ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದ್ದು ಇದೂ ಕೂಡ ಮುಖ್ಯಮಂತ್ರಿ ಬೆಂಬಲಿತ ಬಂದ್ ಕರೆಯಾಗಿದೆ. ಅವರು ಈ ರೀತಿ ರಾಜಕೀಯ ಮಾಡಿದರೆ ನಮಗೂ ರಾಜಕೀಯ ಮಾಡಲು ಗೊತ್ತು ಎಂಬದನ್ನು ತೋರಿಸುತ್ತೇವೆ. ಅಲ್ಲದೆ ಮಹದಾಯಿ ಯೋಜನೆ ಕುರಿತು ರಾಹುಲ್ ಗಾಂಧಿ ಅವರ ಸ್ಪಷ್ಟ ನಿಲುವೇನು ಎಂಬದನ್ನು ತಿಳಿಸಲಿ ಎಂದೂ ಆಗ್ರಹಿಸಿ ಈ ಜಿಲ್ಲಾ ಬಂದ್‍ಗಳಿಗೆ ಕರೆ ನೀಡಲಾಗುತ್ತದೆ ಎಂದು ಬಿ.ಎಸ್. ವೈ ಸ್ಪಷ್ಟಪಡಿಸಿದರು.

ಮಹದಾಯಿ ಯೋಜನೆಯ ಸಂದಿಗ್ಧತೆ ಕಳೆದ 30 ವರ್ಷಗಳಿಂದ ಪರಿಹಾರವಾಗದೆ ಉಳಿದಿದೆ. ಗೋವಾದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಸೋನಿಯಾ ಗಾಂಧಿ ಅವರು ಕರ್ನಾಟಕದ ವಿರುದ್ಧ ನಿಲುವು ತಳೆದಿದ್ದರು. ಇತ್ತೀಚೆಗೆ ತಾನು ಗೋವಾದ ಪ್ರಸಕ್ತ ಮುಖ್ಯಮಂತ್ರಿ ಪರಿಕ್ಕರ್ ಅವರನ್ನು ಭೇಟಿಯಾಗಿ ಮಹದಾಯಿ ಯೋಜನೆ ಪರವಾಗಿ ಅವರಿಂದ ಪತ್ರ ಪಡೆದಾಗ ಗೋವಾದ ಕಾಂಗ್ರೆಸ್ ಮುಖಂಡ ಇದಕ್ಕೆ ವಿರೋಧಿಸಿ ಹೇಳಿಕೆ ನೀಡಿದರು. ಮೊದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ರಾಹುಲ್ ಗಾಂಧಿ ಗೋವಾದ ಕಾಂಗ್ರೆಸ್ ಮುಖಂಡರನ್ನು ಯೋಜನೆ ಜಾರಿಗೆ ಒಪ್ಪಿಸಲಿ ಎಂದು ಯಡಿಯೂರಪ್ಪ ಸವಾಲೆಸೆÀದರು.

ನೀರಾವರಿಗೆ ಆದ್ಯತೆ

ತಾನು ರಾಜ್ಯದ 223 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ರ್ಯಾಲಿ ನಡೆಸಿದ್ದು ಕೊನೆಯದಾಗಿ ತಾ. 25 ರಂದು ಮೈಸೂರಿನಲ್ಲಿ ಏರ್ಪಟ್ಟಿದೆ. ಈ ಪರಿವರ್ತನಾ ಯಾತ್ರೆ ಸಂದರ್ಭ ತಾನು ಕಂಡುಕೊಂಡ ಪ್ರಮುಖ ಸಮಸ್ಯೆಯೊಂದರ ಪರಹಾರಕ್ಕೆ ಆದ್ಯತೆ ನೀಡಲಿರುವದಾಗಿ ಅವರು ಮಾಹಿತಿಯಿತ್ತರು. ಎಲ್ಲ ಜಿಲ್ಲೆಗಳಲ್ಲಿಯೂ ಮುಖ್ಯವಾಗಿ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆಯಿದೆ. ಮುಂದೆ ರಾಜ್ಯದಲ್ಲಿ ಬಿ. ಜೆ. ಪಿ ಸರಕಾರ ಆಡಳಿತಕ್ಕೆ ಬರಲಿದ್ದು ಆ ಸಂದರ್ಭ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳ ಜಾರಿಗಾಗಿ ಒಂದು ಲಕ್ಷ ಕೋಟಿ ಹಣವನ್ನು ವಿನಿಯೋಗಿಸಲಿರುವದಾಗಿ ಯಡಿಯೂರಪ್ಪ ಪ್ರಕಟಿಸಿದರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಪ್ರÀಖರ ಮಾತಿನಿಂದ ಬಿ.ಜೆ.ಪಿ ಗೆ ಧಕ್ಕೆಯಾಗುತ್ತಿಲ್ಲವೆ ಎಂಬ ಪ್ರಶ್ನೆಗೆ ಈಗಾಗಲೇ ನಾಯಕರು ಅವರಿಗೆ ತಿಳಿ ಹೇಳಿದ್ದಾರೆ. ರಾಜ್ಯ ಸಭೆಯಲ್ಲಿಯೂ ಅವರು ಕ್ಷಮೆ ಯಾಚಿಸಿದ್ದಾರಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಭಾರತೀಶ್ ಮೊದಲಾದವರು ಉಪಸ್ಥಿತರಿದ್ದರು.