ಮಡಿಕೇರಿ, ಜ.24 : ಕರ್ನಾಟಕದ ಆರೂವರೆ ಕೋಟಿ ಜನತೆಯ ತೆರಿಗೆ ಹಣವನ್ನು ಲೂಟಿಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಮಾಜವನ್ನು ಒಡೆಯುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸಂಸದ ಹಾಗೂ ಮಾಜೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.ಕರ್ನಾಟಕ ಬಿಜೆಪಿ ಪರಿವರ್ತನಾ ಯಾತ್ರೆಯೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ಜರುಗಿದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಿ 150 ಸ್ಥಾನಗಳ ಗೆಲುವಿನೊಂದಿಗೆ ಮರಳಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಯಾತ್ರೆ ನಡೆಸಲಾಗುತ್ತಿದೆ ಎಂದು ಘೋಷಿಸಿದರು.

ರಾಜ್ಯದಲ್ಲಿ ಒಡೆದು ಆಳುವ ತುಘಲಕ್ ನೀತಿಯೊಂದಿಗೆ ಕಳಸಾ ಭಂಡೂರಿ ಮಹದಾಯಿ ಹೆಸರಿನಲ್ಲಿ ರಾಜಕೀಯ ಮಾಡುತ್ತಾ, ತಾ. 25ರಂದು (ಇಂದು) ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಯಲ್ಲಿ ಬಂದ್‍ಗೆ ಚಿತಾವಣೆ ನಡೆಸುತ್ತಿದ್ದರೂ, ಪಕ್ಷವು ಯಶಸ್ವೀ ಸಮಾವೇಶ ನಡೆಸಲಿರುವದಾಗಿ ಸವಾಲು ಎಸೆದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದು ರಾಜ್ಯದ ಆರೂವರೆ ಕೋಟಿ ಜನತೆಯ ಆಶೀರ್ವಾದದಿಂದ ಬಿಜೆಪಿ ಅಧಿಕಾರ ಪಡೆಯುವ ಮೂಲಕ ಮುಂದಿನ 5 ವರ್ಷ ಸುಖೀ ಜೀವನವನ್ನು ಕಲ್ಪಿಸುವದಾಗಿಯೂ ಅವರು ಭರವಸೆ ನೀಡಿದರು.

ಕಳಸಾ ಭಂಡೂರಿ ಮಹದಾಯಿ ವಿವಾದ ಕಾಂಗ್ರೆಸ್ಸಿಗರ 30 ವರ್ಷದ ಪಾಪದ ಕೂಸು ಎಂದು ಹರಿಹಾಯ್ದು ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಗುರ ಮಾತುಗಳನ್ನು ಆಡುತ್ತಾ, ರಾಜ್ಯದ ಜನತೆಯನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದರು.

ತಾಲೂಕು ಪರಿಶೀಲನೆ : ಕೊಡಗಿನ ಜನತೆ ರಾಜ್ಯದ ಮುಂದಿಟ್ಟಿರುವ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ಬೇಡಿಕೆಗಳನ್ನು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪರಿಶೀಲಿಸಿ

(ಮೊದಲ ಪುಟದಿಂದ) ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಮಾಜಿ ಮುಖ್ಯಮಂತ್ರಿಗಳು ಇದೇ ಸಂದರ್ಭ ಭರವಸೆ ನೀಡಿದರು. ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಲುಕು ಹಾಕಿದ ಯಡಿಯೂರಪ್ಪ ಅವರು, ಪ್ರಸಕ್ತ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವದರೊಂದಿಗೆ ಕೇಂದ್ರದ ನೆರವಿನಿಂದ ಪರಿಣಾಮಕಾರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಮಾಣಿಕ ಪ್ರಯತ್ನ ನಡೆಸುವದಾಗಿ ಘೋಷಿಸಿದ ಅವರು ಸಮೃದ್ಧ ಕರ್ನಾಟಕಕ್ಕಾಗಿ ಮತ್ತು ಕೊಡಗಿನ ಸಮಗ್ರ ಏಳಿಗೆಗಾಗಿ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿರುವದಾಗಿ ಕಾರ್ಯಕರ್ತರ ಹರ್ಷೋದ್ಗಾರದ ನಡುವೆ ನುಡಿದರು.

ಶೋಭಾ ವಾಗ್ದಾಳಿ : ಕಳೆದ ನ. 2ರಂದು ರಾಜ್ಯದೆಲ್ಲೆಡೆ ಆರಂಭಗೊಂಡ ಬಿಜೆಪಿ ಪರಿವರ್ತನಾ ಯಾತ್ರೆಯು ಕಳೆದ ನ. 10ರಂದು ಟಿಪ್ಪು ಜಯಂತಿ ಹಿನ್ನೆಲೆ ಕೊಡಗು ಪ್ರವೇಶಿಸಲು ಸಿದ್ದರಾಮಯ್ಯ ಸರಕಾರ ಅವಕಾಶ ನೀಡಲಿಲ್ಲವೆಂದು ವಾಗ್ದಾಳಿ ನಡೆಸಿದ ಸಂಸದೇ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ರಾಷ್ಟ್ರಘಾತುಕರೊಂದಿಗೆ ಕಾಂಗ್ರೆಸ್ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಬಡವರ ಅಕ್ಕಿ ಕಾಳಸಂತೆ ಮಾರಾಟ : ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರದಿಂದ ನೆರವು ಒದಗಿಸಿದರೆ, ಆ ಅಕ್ಕಿಯನ್ನು ನೆರೆಯ ರಾಜ್ಯಕ್ಕೆ ಕಾಳಸಂತೆಯಲ್ಲಿ ಮಾರಾಟಗೊಳಿಸಲಾಗುತ್ತಿದೆ ಎಂದು ಆರೋಪಿಸಿದ ಶೋಭಾ, ಇಂಥ ಭ್ರಷ್ಟ ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದೇಶದ ಸೈನಿಕರಿಗೆ ಸಮರ್ಪಕ ಶಸ್ತ್ರಾಸ್ತ್ರಗಳನ್ನು ಕೂಡ ನೀಡಲಿಲ್ಲವೆಂದು ಟೀಕಾಪ್ರಹಾರ ನಡೆಸಿದರು.

ಕರ್ನಾಟಕದಲ್ಲಿ ಯಾರಿಗೂ ಬೇಡವಾಗಿದ್ದ ಟಿಪ್ಪು ಜಯಂತಿ ಹೆಸರಿನಲ್ಲಿ ರಾಷ್ಟ್ರಘಾತುಕ ಶಕ್ತಿಗಳನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಮೂಲಕ 20ಕ್ಕೂ ಅಧಿಕ ಅಮಾಯಕರ ಹತ್ಯೆಗೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದ ಅವರು, ಟಿಪ್ಪು ಜಯಂತಿ ವೇಳೆ ಹುತಾತ್ಮರಾದ ಕುಟ್ಟಪ್ಪ ಸಾವು ವ್ಯರ್ಥವಾಗಬಾರದು ಎಂದು ಮಾರ್ನುಡಿದರು.

ಡಿವಿಎಸ್ ಬೇಡಿಕೆ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಕೊಡಗಿನಲ್ಲಿ ಬಿಜೆಪಿ ಸಮಾವೇಶ ನಡೆಸಲು ವಿಶಾಲ ಮೈದಾನವೊಂದನ್ನು ರಾಜ್ಯ ಬಿಜೆಪಿ ಸರಕಾರದಿಂದ ನಿರ್ಮಿಸಿಕೊಟ್ಟು, ಭವಿಷ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆ ಮೈದಾನದಲ್ಲಿ ನಿಂತು ಕೊಡಗಿನ ಜನತೆಯ ಬೇಡಿಕೆಗಳನ್ನು ಆಲಿಸಲು ಅನುವು ಮಾಡಿಕೊಡುವಂತೆ ಬೇಡಿಕೆಯಿಟ್ಟರು. ಕಿರಿದಾದ ಗಾಂಧಿ ಮೈದಾನ ಕಾಂಗ್ರೆಸ್ಸಿಗರಿಗೆ ಸಾಕೆಂದು ಹಾಸ್ಯ ಚಟಾಕಿ ಹಾರಿಸಿದರು.

ಇಂದು ಮಡಿಕೇರಿಯಲ್ಲಿ ನೆರೆದಿರುವ ಜನಸ್ತೋಮ ಕಂಡು ಇಷ್ಟು ದಿನ ನಿದ್ದೆಗೆ ಜಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರಿಸಲಾರರು ಎಂದ ಅವರು, ಟಿಪ್ಪು ಜಯಂತಿ ಬದಲಿಗೆ ಫೀ.ಮಾ. ಕಾರ್ಯಪ್ಪ, ಜ. ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡರ ಜಯಂತಿಗಳನ್ನು ಆಚರಿಸುವಂತೆ ಕಿವಿಮಾತು ಹೇಳಿದರು. ಕಾಂಗ್ರೆಸ್ ಸರಕಾರದಿಂದ ಪ್ರಾಮಾಣಿಕ ಅಧಿಕಾರಿಗಳಿಗೂ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲವೆಂದು ಅವರು ಬೊಟ್ಟು ಮಾಡಿದರು.

ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಮಾಜೀ ಸಂಸದೆ ತೇಜಸ್ವಿನಿ ರಮೇಶ್, ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳು ಜನಸ್ತೋಮ ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ರವಿಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಉದಯಕುಮಾರ್ ಶೆಟ್ಟಿ, ಕಿರಣ್‍ಕುಮಾರ್, ಮನು ಮುತ್ತಪ್ಪ, ಎಸ್.ಜಿ. ಮೇದಪ್ಪ, ರವಿಕುಶಾಲಪ್ಪ, ಕಾಂತಿ ಸತೀಶ್, ರವಿ ಕಾಳಪ್ಪ, ತಳೂರು ಕಿಶೋರ್ ಕುಮಾರ್, ವಿ.ಕೆ. ಲೋಕೇಶ್, ಎಂ. ಬಿ. ದೇವಯ್ಯ, ಜಪ್ಪು ಅಚ್ಚಪ್ಪ ಮೊದಲಾದವರು ಹಾಜರಿದ್ದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಸೇರಿದಂತೆ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾ ಮುಖಂಡರು, ಅಧಿಕ ಸಂಖ್ಯೆಯ ಯುವಕರ ಸಹಿತ ನೆರೆದಿದ್ದ ಜನಸ್ತೋಮ ಬಿಜೆಪಿ ಪರಿವರ್ತನಾ ಯಾತ್ರೆಗೆ ಸಾಕ್ಷಿಯಾಯಿತು. ಭಾರತೀ ರಮೇಶ್ ಸಂಗಡಿಗರಿಂದ ವಂದೇ ಮಾತರಂನೊಂದಿಗೆ, ರಾಬಿನ್ ದೇವಯ್ಯ ಕಾರ್ಯಕ್ರಮ ನಿರೂಪಿಸಿ, ಬಿ.ಬಿ. ಭಾರತೀಶ್ ಸ್ವಾಗತಿಸುವ ಮೂಲಕ ಬಾಲಚಂದ್ರ ಕಳಗಿ ವಂದಿಸಿದರು.