ಗುಡ್ಡೆಹೊಸೂರು, ಜ. 25: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಂದ ಸಂತೆ ವ್ಯಾಪಾರ ನಡೆಯಿತು. ಕುಶಾಲನಗರದಲ್ಲಿ ಸಂತೆ ದಿನವಾದ್ದರಿಂದ ಕುಶಾಲನಗರ ಸಂತೆಯನ್ನು ನೆನಪಿಸುವಂತಿತ್ತು.

ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ ಬ್ಯಾಂಡ್ ಬಾರಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಸಂತೆ ಮಧ್ಯಾಹ್ನ 1 ಗಂಟೆತನಕ ನಡೆಯಿತು. ಸ್ಥಳೀಯ ನಾಗರಿಕರು ಮಕ್ಕಳು ವ್ಯಾಪಾರಕ್ಕಿಟ್ಟಿದ್ದ ತರಕಾರಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.

ಮಕ್ಕಳಲ್ಲಿ ವ್ಯವಹಾರ ಜ್ಞಾನ ವೃದ್ಧಿಯಾಗಲು ಈ ರೀತಿಯ ಕಾರ್ಯಕ್ರಮ ಸಹಕಾರಿಯಾಗುವದಾಗಿ ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ತಿಳಿಸಿದರು. ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.