ಮಡಿಕೇರಿ, ಜ. 25: ಉತ್ತರ ಕರ್ನಾಟಕ ಭಾಗದ ಮಹದಾಯಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿ ದಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‍ಗೆ ಕೊಡಗು ಜಿಲ್ಲೆಯಲ್ಲಿ ಯಾವದೇ ಸ್ಪಂದನೆ ದೊರೆಯಲಿಲ್ಲ.ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಜನರ ಓಡಾಟ, ವ್ಯಾಪಾರ ವಹಿವಾಟು, ಖಾಸಗಿ ಬಸ್‍ಗಳು ಹಾಗೂ ಆಟೋ ಸಂಚಾರ ಎಂದಿನಂತೆ ಕಂಡುಬಂದಿತು. ಆದರೆ ಹೊರ ಜಿಲ್ಲೆಗಳಿಗೆ ತೆರಳಬೇಕಾದ ಕೆ.ಎಸ್.ಆರ್.ಟಿ.ಸಿ. ಬಸ್ ಮಾತ್ರ ರಸ್ತೆ ಗಿಳಿಯದೆ ಬಂದ್ ಬೆಂಬಲಿಸಿದರೆ ಸ್ಥಳೀಯ ಸಾರಿಗೆ ಬಸ್‍ಗಳು ಸಂಚರಿಸಿದವು.ಸೋಮವಾರಪೇಟೆ : ಪಟ್ಟಣದಲ್ಲಿ ಜನಜೀವನ ಎಂದಿನಂತೆ ಕಂಡುಬಂದರೆ ಗ್ರಾಮೀಣ ಪ್ರದೇಶದಲ್ಲಿ ಬಂದ್‍ನ ಸನ್ನಿವೇಶ ಗೋಚರಿಸಲಿಲ್ಲ. ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಹೊರತುಪಡಿಸಿದರೆ ವಾಹನ ಸಂಚಾರ ಮಾಮೂಲಿನಂತೆ ಇತ್ತು.

ಖಾಸಗಿ ಬಸ್‍ಗಳು, ಆಟೋಗಳ ಸಂಚಾರ ಎಂದಿನಂತೆ ಸಾಗಿದ್ದರೆ, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವ್ಯವಹಾರ ಮಾಮೂಲಿಯಾಗಿತ್ತು. ಕೆಎಸ್‍ಆರ್‍ಟಿಸಿ ಬಸ್‍ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಹೊರ ಜಿಲ್ಲೆಗಳಿಗೆ ತೆರಳುವ ಮಂದಿಗೆ ಅನಾನುಕೂಲವಾಗಿದ್ದನ್ನು ಹೊರತುಪಡಿಸಿದರೆ ಬಂದ್‍ನ ಬಿಸಿ ಎಲ್ಲೂ ಕಂಡುಬರಲಿಲ್ಲ.

ಇಲ್ಲಿನ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿಗೆ ಮಾತ್ರ ಬಂದ್ ಹಿನ್ನೆಲೆ ರಜೆ ನೀಡಲಾಗಿತ್ತು. ಉಳಿದಂತೆ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಎಂದಿನಂತೆ ತರಗತಿಗಳು ನಡೆದವು.

ಮಹದಾಯಿ ಯೋಜನೆಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿ ಸೋಮವಾರಪೇಟೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸಬೇಕಿದೆ. ಸುಮಾರು 199 ಟಿಎಂಸಿ ನೀರು ಹರಿದು ಸಮುದ್ರ ಪಾಲಾಗುತ್ತಿದ್ದು, ಕೇವಲ 7 ಟಿಎಂಸಿ ನೀರನ್ನು ಆ ಭಾಗದ ಜನರಿಗೆ ಕುಡಿಯಲು ನೀಡಲೂ ಸಹ ಗೋವಾ ಅಡ್ಡಿ ಪಡಿಸುತ್ತಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ದೀಪಕ್ ಆರೋಪಿಸಿದರು.