ಭಾಗಮಂಡಲ, ಜ. 25: ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಕೆಲವು ಸಂಘಟನೆಗಳು ತಲಕಾವೇರಿ-ಭಾಗಮಂಡಲ ಕ್ಷೇತ್ರದ ಬಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಪರ ವಿರೋಧ ಹೇಳಿಕೆಗಳನ್ನು ನೀಡುತ್ತಿರುªದರ ಬಗ್ಗೆ ಭಾಗಮಂಡಲ ಗೌಡ ಸಮಾಜ ಪ್ರತಿಕ್ರಿಯೆ ನೀಡಿದೆ. ಕ್ಷೇತ್ರಗಳು ನಾಡಿನ, ರಾಷ್ಟ್ರದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶ್ರದ್ಧಾ ಭಕ್ತಿಯಿಂದ ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂಘಟನೆಗಳು ನೀಡುತ್ತಿರುವ ಹೇಳಿಕೆಗಳು ನಾಡಿನ ಜನರಿಗೆ ನೋವನ್ನುಂಟು ಮಾಡಿದೆ. ಧಾರ್ಮಿಕ ನಂಬಿಕೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಪೂಜಾ ಕೈಂಕರ್ಯ ಕೈಗೊಳ್ಳಲು ಶ್ರದ್ಧಾ ಕೇಂದ್ರಗಳಾಗಿದ್ದು, ಕೆಲವು ಸಂಕುಚಿತ ಮನೋಭಾವದವರ ಹೇಳಿಕೆಯಿಂದ ಚರ್ಚೆಗೆ ಗ್ರಾಸವಾಗಿರುವದು ವಿಷಾದಕರ ಎಂದು ಹೇಳಿಕೆ ನೀಡಿದೆ.
ಭಾಗಮಂಡಲ ಪ್ರದೇಶವು ಸಾಕಷ್ಟು ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದ್ದು, ಅಭಿವೃದ್ಧಿಯಲ್ಲಿ ತೀವ್ರ ಹಿನ್ನೆಡೆಯನ್ನು ಅನುಭವಿಸುತ್ತಿದೆ. ಮಳೆಗಾಲದಲ್ಲಿ ರಾಷ್ಟ್ರದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಪ್ರವಾಹ ಬಂದು ಭಾಗಮಂಡಲದ ಎಲ್ಲಾ ಗ್ರಾಮದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಹೊರ ಜಗತ್ತಿನ ಸಂಪರ್ಕ ಕಡಿತಗೊಂಡು ಮೂಲಭೂತ ಅವಶ್ಯಕತೆಯಿಂದ ವಂಚಿತರಾಗಿ ತೀವ್ರ ತೊಂದರೆ ಅನುಭವಿಸುತ್ತಿದೆ. ಸರಕಾರ ಮಳೆಗಾಲದಲ್ಲಿ ಪ್ರವಾಹದಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಲು ಶಾಶ್ವತ ಪರಿಹಾರವಾಗಿ ಭಾಗಮಂಡಲಕ್ಕೆ ಮೇಲು ಸೇತುವೆ ಮಂಜೂರು ಮಾಡಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಚಾಲನೆ ನೀಡಿದ್ದು, ಈ ಕೊಡುಗೆಯನ್ನು ಭಾಗಮಂಡಲದ ಎಲ್ಲಾ ಜನಾಂಗದವರು ಸ್ವಾಗತಿಸಿದ್ದಾರೆ. ತಲಕಾವೇರಿ, ಬ್ರಹ್ಮಗಿರಿ ಬೆಟ್ಟಕ್ಕೆ ಶ್ರದ್ಧಾ ಭಕ್ತಿಯಿಂದ ಬರುವ ಭಕ್ತಾದಿಗಳಿಗೆ ತೆರಳಲು ಈಗಿರುವಂತೆ ಯಥಾಸ್ಥಿತಿಯನ್ನು ಕಾಯ್ದಕೊಳ್ಳುವಂತೆ ನೋಡಿಕೊಳ್ಳಲು ಗೌಡ ಸಮಾಜ ಒತ್ತಾಯಿಸಿದೆ.
ಭಾಗಮಂಡಲ-ತಲಕಾವೇರಿ ಪವಿತ್ರ ಕ್ಷೇತ್ರದ ಸಮಿತಿಯ ಕಾರ್ಯ ಚಟುಚಟಿಕೆಯನ್ನು ಆದಷ್ಟು ಬೇಗನೆ ಪ್ರಾರಂಭಿಸಬೇಕು. ಕ್ಷೇತ್ರದ ಎಲ್ಲಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸೇರಿ ಇತರ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಸ್ಥಳೀಯ ಜನರ ಭಾವನೆಗಳನ್ನು ಗೌರವಿಸಬೇಕೆಂದು ಒತ್ತಾಯಿಸಿದೆ.