ಸೋಮವಾರಪೇಟೆ, ಜ. 25: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗು 14ನೇ ಹಣಕಾಸು ಯೋಜನೆಯಡಿ ಮಾದಾಪುರ ಗ್ರಾ.ಪಂ.ನಲ್ಲಿ ಯಾವದೇ ಅವ್ಯವಹಾರ ನಡೆದಿಲ್ಲ. ರಾಜಕೀಯ ದ್ವೇಷದಿಂದ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಂದಾಜುಪಟ್ಟಿಯಂತೆ ಕಾಮಗಾರಿಗಳು ನಡೆದಿದ್ದು, ಎಲ್ಲ ದಾಖಲೆಗಳು ಪಂಚಾಯಿತಿಯಲ್ಲಿವೆ. ಗ್ರಾಮಸಭೆಗಳಲ್ಲಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸಲು ಅವಕಾಶವಿದೆ. ಆದರೆ ಮಾಜಿ ಅಧ್ಯಕ್ಷ ಭಾಸ್ಕರ ಸಾಯಿ ಅವರು ಪತ್ರಿಕಾ ಹೇಳಿಕೆಗಳ ಮೂಲಕ ಪಂಚಾಯಿತಿ ಹಾಗು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ದಲಿತ ಜನಾಂಗದ ಅಧ್ಯಕ್ಷೆ ಎಂಬ ಕಾರಣಕ್ಕೆ ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ತಾನು ಅಧಿಕಾರ ವಹಿಸಿಕೊಂಡ ದಿನದಿಂದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ರಾಜಕೀಯ ದ್ವೇಷದಿಂದ ಮಾಜಿ ಅಧ್ಯಕ್ಷರು ಸುಳ್ಳು ಆರೋಪಗಳನ್ನು ಮಾಡುತ್ತ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ದಲಿತ ದೌರ್ಜನ್ಯ ಕಾಯ್ದೆಯಡಿ ಸಂಬಂಧಪಟ್ಟವರಿಗೆ ದೂರು ನೀಡಲಾಗುವದು ಎಂದರು.
ಭಾಸ್ಕರ್‍ಸಾಯಿ ಅಧ್ಯಕ್ಷರಾಗಿದ್ದ ಸಂದರ್ಭ 2014-15ನೇ ಸಾಲಿನಲ್ಲಿ ಕುಂಬೂರು ವಾರ್ಡ್‍ನ ಸುವರ್ಣ ಗ್ರಾಮ ಯೋಜನೆಯಡಿ 1.50.ಕೋಟಿ ರೂ. ಅನುದಾನ ಬಂದಿದ್ದು, ಅನುದಾನದಲ್ಲಿ ನಡೆದ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಕಳಪೆ ಯಾಗಿದ್ದು, ನೀರು ಸಂಗ್ರಹವಾಗುತ್ತಿಲ್ಲ. ಈ ಬಗ್ಗೆ ಒಂಬುಡ್ಸ್‍ಮನ್‍ಗೆ ದೂರು ನೀಡಲಾಗುವದು ಎಂದು ಗೋಷ್ಠಿಯಲ್ಲಿದ್ದ ಸದಸ್ಯ ಸೋಮಪ್ಪ ಹೇಳಿದರು.
ಜಿಲ್ಲೆಯ ಪ್ರತಿ ಗ್ರಾ. ಪಂ.ಗಳಲ್ಲಿ ನರೇಗಾದಲ್ಲಿ ಕಾಮಗಾರಿ ಕೈಗೊಳ್ಳಲು ನಿಯಮಗಳನ್ನು ಸಡಿಸಗೊಳಿಸ ಬೇಕಾಗುತ್ತದೆ. ಮಾಜಿ ಅಧ್ಯಕ್ಷ ಭಾಸ್ಕರ್‍ಸಾಯಿಯವರು ವೈಯಕ್ತಿಕ ದ್ವೇಷದಿಂದ ನರೇಗಾ ಕಾಮಗಾರಿಗಳ ಬಗ್ಗೆ ತಕರಾರು ತೆಗೆದಿದ್ದಾರೆ. ಭಾಸ್ಕರ್‍ಸಾಯಿ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ಮರು ತನಿಖೆಗೆ ಒಂಬುಡ್ಸ್‍ಮನ್‍ಗೆ ದೂರು ನೀಡಲಾಗುವದು ಎಂದು ಪಂಚಾಯಿತಿ ಸದಸ್ಯರಾದ ಎನ್.ಎನ್. ಪ್ರಸನ್ನ ಕುಮಾರ್ ಹಾಗೂ ಮಜೀದ್ ಹೇಳಿದರು.