ವೀರಾಜಪೇಟೆ, ಜ. 23: ಕೇರಳದ ಹುಲಿಕಲ್‍ನ ಆದಿ ಬೈತೂರಪ್ಪ ದೇವಾಲಯದಲ್ಲಿ ಶತಮಾನಗಳಿಂದಲೂ ಕೊಡಗಿನ ದೇವಣಗೇರಿಯ ಪುಗ್ಗೇರ ಕುಟುಂಬದವರ ಶ್ರದ್ಧಾ ಭಕ್ತಿಯ ಅಮೋಘ ಸೇವೆಯಿಂದ ಹಾಗೂ ಕೇರಳದ ಹುಲಿಕಲ್ ಸುತ್ತ ಮುತ್ತಲ ಭಕ್ತಾದಿಗಳ ಸಹಕಾರದಿಂದ ದೇವಾಲಯ ಮೂಲ ಸೌಲಭ್ಯಗಳಿಂದ ಪವಿತ್ರÀ ಪುಣ್ಯಕ್ಷೇತ್ರವಾಗಿದೆ. ಇದರಿಂದ ಕೊಡಗಿನ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕೇರಳದ ಹುಲಿಕಲ್‍ನ ಬೈತೂರಿನಲ್ಲಿ ಪುಗ್ಗೇರ ಬೈತೂರಪ್ಪ ಸಂಘದಿಂದ ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆದಿ ಬೈತೂರಪ್ಪ ಭವನದ ಕೊಡಗು ಹಾಲ್‍ನ್ನು ಉದ್ಘಾಟಿಸಿದ ಬೋಪಯ್ಯ, ಬೈತೂರಪ್ಪ ದೇವಾಲಯದಿಂದ ಕೊಡಗು ಕೇರಳದ ಭಕ್ತಾದಿಗಳು ಧಾರ್ಮಿಕವಾಗಿ ಅವಿನಾಭಾವನಾತ್ಮಕ ಸಂಬಂಧ ಹೊಂದಿದೆ. ಇಂತಹ ಸ್ಥಳಗಳಲ್ಲಿ ಧರ್ಮ ನೆಲೆಯಾದರೆ ಅಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿ ನೆಲೆಯೂರಲಿದೆ. ಸರಕಾರದ ಯಾವದೇ ಅನುದಾನವಿಲ್ಲದೆ ದೇವಾಲಯಕ್ಕೆ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಬೈತೂರಪ್ಪ ಬಿಲ್ಡಿಂಗ್ ಫಂಡ್‍ನ ಅಧ್ಯಕ್ಷ ಪುಗ್ಗೇರ ಎ. ಪೊನ್ನಪ್ಪ, ಪುಗ್ಗೇರ ರಂಜಿ ದೇವಯ್ಯ ಹಾಗೂ ಸಮಿತಿಯ ವಿಶಿಷ್ಟ ಶ್ರಮದ ಸೇವೆ ಸ್ಮರಣೀಯ.ಕೊಡಗಿನ ಭಕ್ತಾದಿಗಳಿಗೆ ಸಂಬಂಧವಿರುವ ಬೈತೂರು ಕ್ಷೇತ್ರದ ಅಭಿವೃದ್ದಿ, ಪ್ರಗತಿಗೆ ಕೊಡಗಿನ ಉದಾರ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದರು. ಅತಿಥಿಯಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೊಡಗಿನ ಭಕ್ತಾದಿಗಳಿಗೆ ಕೇರಳದ ಹುಲಿಕಲ್‍ನ ಬೈತೂರಪ್ಪ ದೇವಾಲಯ ಪುಣ್ಯಕ್ಷೇತ್ರವಾಗಿದೆ. ಕೊಡಗಿನ ಪುಗ್ಗೇರ ಕುಟುಂಬದ ಸೇವೆಯಿಂದ ಕೊಡಗಿನ ಭಕ್ತಾದಿಗಳು ಬೈತೂರಪ್ಪ ದೇವಾಲಯದಲ್ಲಿ ಧಾರ್ಮಿಕವಾಗಿ ಶಾಶ್ವತವಾಗಿ ಸಂಪರ್ಕ ಬೆಳೆಸುವಂತಾಗಿದೆ. ಕೊಡಗಿನ ಮೂಲ ದೇವರುಗಳ ಸ್ಥಾನ ಕೇರಳದಲ್ಲಿರುವದು ಹಿಂದಿನ ಹಿರಿಯರ ಅಭಿಪ್ರಾಯ. ಬೈತೂರು ದೇವಾಲಯ ಭಕ್ತಾದಿಗಳಿಂದ ಇನ್ನಷ್ಟು ಪ್ರಗತಿಯನ್ನು ಸಾಧಿಸುವಂತಾಗಲಿ ಎಂದು ಹಾರೈಸಿದರು.

ಸಭೆಯನ್ನುದ್ದೇಶಿಸಿ ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸಮಿತಿಯ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಹುಲಿಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಷರ್ಲಿ ಅಲೆಕ್ಸಾಂಡರ್, ಅಘೋಷ ಸಮಿತಿ ಚೇರ್‍ಮನ್ ಬಿ. ದಿವಾಕರ್, ಪರಂಪರೆಯ ಮಾಜಿ ಟ್ರಸ್ಟಿ ಎ.ಕೆ. ವೇಣುಗೋಪಾಲ್, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಎಂ. ಪೊನ್ನಪ್ಪ, ದಾನಿಗಳಾದ ಬಲಮುರಿಯ ಬೊಳ್ಳಚೆಟ್ಟಿರ ಸುರೇಶ್, ಎಂ.ಕೆ. ಮೋಹನ್‍ದಾಸ್ ಮಾತನಾಡಿದರು. ವೇದಿಕೆಯಲ್ಲಿ ಪೂಮಾಲೆ ವಾರ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಪುಗ್ಗೇರ ಪೊನ್ನಪ್ಪ, ಪುಗ್ಗೇರ ರಂಜಿ ದೇವಯ್ಯ, ಪಿ.ಜಿ.ನಂದಾ ಗಣಪತಿ, ನಂದಾ ಸುಬ್ಬಯ್ಯ ಹಾಗೂ ಪಿ.ಎ.ಪ್ರವೀಣ್ ಹಾಗೂ ಬಿ.ಮಂದಪ್ಪ ಉಪಸ್ಥಿತರಿದ್ದರು. ಇದೇ ಸಮಾರಂಭದಲ್ಲಿ ದೇವಾಲಯದ ಸಮಾಜ ಸೇವಕರುಗಳಾದ ಬೊಳ್ಳಚೆಟ್ಟಿರ ಸುರೇಶ್ ಹಾಗೂ ಮೋಹನ್‍ದಾಸ್ ಇವರುಗಳನ್ನು ಸನ್ಮಾನಿಸಲಾಯಿತು.

ಪುಗ್ಗೇರ ಕುಟುಂಬದ ಹಿರಿಯ ತಕ್ಕರಾದ ಅಯ್ಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳದ ಹುಲಿಕಲ್ ಬೈತೂರು ದೇವಾಲಯದ ಇತಿಹಾಸ, ದೇವಣಗೇರಿ ಗ್ರಾಮದ ಪುಗ್ಗೇರ ಕುಟುಂಬಕ್ಕಿರುವ ಧಾರ್ಮಿಕ ಸಂಬಂಧ ಹಾಗೂ ದೇವಾಲಯ ನಡೆದು ಬಂದ ದಾರಿ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ವೀರಾಜಪೇಟೆ ಎವರ್ ಗ್ರೀನ್ ಹಾಗೂ ಅಮ್ಮತ್ತಿಯ ನಾಟ್ಯಾಂಜಲಿ ತಂಡದಿಂದ ಈಶ್ವರನ ರುದ್ರ ತಾಂಡವ ನೃತ್ಯ ಏರ್ಪಡಿಸಲಾಗಿತ್ತು. ದೇವಾಲಯದ ಅಧ್ಯಕ್ಷ ಪುಗ್ಗೇರ ಪೊನ್ನಪ್ಪ ಅವರಿಂದ ಸ್ವಾಗತ, ರಂಜಿ ದೇವಯ್ಯ ಅವರಿಂದ ವರದಿ ವಾಚನ, ರಾಣಾ ಕಾರ್ಯಪ್ಪ ನಿರೂಪಿಸಿ, ಪ್ರವೀಣ್ ವಂದಿಸಿದರು.