ಸೋಮವಾರಪೇಟೆ, ಜ. 23: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಉದ್ಘಾಟಿಸಿದರು.

ನಂತರ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಹಕಾರ ಸಂಘಗಳು ಕೃಷಿಕರ ಶ್ರೇಯೋಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸರ್ಕಾರ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ. ರೈತರು ಕೂಡ ಸಹಕಾರ ಸಂಘಗಳ ಬೆಳವಣಿಗೆಗೆ ಶ್ರಮಿಸಬೇಕು. ಸಂಘದ ಸದಸ್ಯರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಪರಿಕರಗಳನ್ನು ಸಂಘದಲ್ಲಿ ಖರೀದಿ ಮಾಡಬೇಕು. ಸಂಘದ ಆಡಳಿತ ಮಂಡಳಿಯೂ ಸಹ ತನ್ನ ಸದಸ್ಯರ ಬೇಕು ಬೇಡಿಕೆಗಳತ್ತ ಹೆಚ್ಚಿನ ಒತ್ತು ನೀಡುವ ಮೂಲಕ ಅನುಕೂಲ ಕಲ್ಪಿಸಿಕೊಡಬೇಕೆಂದರು.

ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ಶೇ. 10 ರಷ್ಟು ಸಾಲ ಮರು ಪಾವತಿ ಯಾಗಿದೆ. ಸಂಘದ ಅಭಿವೃದ್ಧಿಯಲ್ಲಿ ಸದಸ್ಯರ ಪಾಲು ಇದೆ. ಮುಂದಿನ ದಿನಗಳಲ್ಲಿ ಸಂಘದ ಮೂಲಕ ಇನ್ನೂ ಹೆಚ್ಚಿನ ಸವಲತ್ತು ನೀಡಲಾಗುವದು ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಬಿ. ಕರುಂಬಯ್ಯ, ಸದಸ್ಯರಾದ ಎಂ.ಎಸ್. ಮುತ್ತಪ್ಪ, ಡಿ.ಹೆಚ್. ವಿಶ್ವನಾಥರಾಜೇ ಅರಸ್, ಟಿ.ಕೆ. ರಮೇಶ್, ಕೆ.ಎಲ್. ಹೊನ್ನಪ್ಪ, ಹೆಚ್.ಜೆ. ಬಸಪ್ಪ, ಡಿ.ಸಿ. ಸಬಿತ, ಎಸ್.ಎಂ. ಲಲಿತ, ಎಂ.ಜೆ. ಜಯಪ್ರಕಾಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ನಟರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಇದ್ದರು.