ಶ್ರೀಮಂಗಲ, ಜ. 23: ಜಿಲ್ಲೆಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯಿಂದ ಬ್ಯಾಂಕ್‍ನಲ್ಲಿ ಹೊಂದಿರುವ ಸಾಲ ಮರು ಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ಹಿನ್ನೆಲೆ ಬ್ಯಾಂಕ್ ಸಾಲಗಳನ್ನು ಬಲತ್ಕಾರ ವಸೂಲಾತಿಗೆ ಮುಂದಾಗದಂತೆ ಹಾಗೂ ಬೆಳೆಗಾರರು ಹೊಂದಿರುವ ಸಾಲ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್‍ನಿಂದ ರಾಜ್ಯ ಮಟ್ಟದ ಬ್ಯಾಂಕ್‍ಗಳ ಸಭೆಯಲ್ಲಿ (ಎಸ್.ಎಲ್.ಬಿ.ಸಿ) ಪ್ರಸ್ತಾಪಿಸಿ ಆ ಸಭೆಯ ನಿರ್ಣಯದಂತೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾ ಲೀಡ್ ಬ್ಯಾಂಕ್‍ನ ಮುಖ್ಯಸ್ಥ ಕೆ.ಎನ್.ವಿ.ಎಸ್.ಬಿ. ಗುಪ್ತಾಜಿ ಭರವಸೆ ನೀಡಿದರು.

ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ (ಬಿ.ಎಲ್.ಬಿ.ಸಿ) ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ, ಕೊಡಗು ಜಿಲ್ಲಾ ರೈತ ಸಂಘ ಮತ್ತು ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಂಟಿಯಾಗಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿದ ಸಂದರ್ಭ ಅವರು ಈ ಭರವಸೆ ಅವರು ನೀಡಿದರು.

ಕಳೆದ ಹಲವು ವರ್ಷದಿಂದ ಬೆಳೆಗಾರರು ಉತ್ಪಾದನಾ ವೆಚ್ಚ ಹೆಚ್ಚಳ, ಫಸಲು ಕುಸಿತ, ಮಾರುಕಟ್ಟೆ ಕುಸಿತದೊಂದಿಗೆ ಸಂಕಷ್ಟದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಕಾಫಿ ಉತ್ಪಾದನೆ ತೀವ್ರ ಕುಸಿತವಾಗಿದೆ. ಇದರೊಂದಿಗೆ ಕರಿಮೆಣಸು ಹಾಗೂ ಕಾಫಿಯ ದರ ಸಹ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಬೆಳೆಗಾರರಿಗೆ ಬ್ಯಾಂಕ್‍ನ ಯಾವದೇ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ ಬೆಳೆಗಾರರ ಎಲ್ಲಾ ಬ್ಯಾಂಕ್ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವಂತೆ ಈಗಾಗಲೇ ಸರಕಾರದ ಮಟ್ಟದಲ್ಲಿ ವ್ಯವಹರಿಸಲಾಗುತ್ತಿದೆ. ಆದ್ದರಿಂದ ಬೆಳೆಗಾರ ಸಂಕಷ್ಟ ಅರಿತು ಬೆಳೆಗಾರರಿಗೆ ಬ್ಯಾಂಕ್ ಸಾಲದ ಮರುಪಾವತಿಗಾಗಿ ಯಾವುದೇ ಒತ್ತಡ ಹಾಕಬಾರದು. ನ್ಯಾಯಾಲಯದ ಮೂಲಕ ವಸೂಲಾತಿಗೆ ಹಾಗೂ ಬ್ಯಾಂಕುಗಳು ಮತ್ತು ವಕೀಲರ ಮೂಲಕ ಯಾವದೇ ನೊಟೀಸ್ ಜಾರಿ ಮಾಡದಂತೆ ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ನಬಾರ್ಡ್‍ನ ಡಿ.ಜಿ.ಎಂ. ಎಂ.ಸಿ. ನಾಣಯ್ಯ ಮಾತನಾಡಿ, 1998ಕ್ಕೂ ಮುಂಚೆ ಕೆಲವು ದೊಡ್ಡ ಬೆಳೆಗಾರರು ಪಡೆದಿರುವ ಸಾಲ ಮರುಪಾವತಿಸುವ ಸಾಮಥ್ರ್ಯವಿದ್ದರೂ ಉದ್ದೇಶಪೂರ್ವಕವಾಗಿ ಸುಸ್ತಿದಾರರಾಗಿದ್ದಾರೆ. ಈ ಸಮಯದಿಂದ 4 ಬಾರಿ ಈ ಸಾಲವನ್ನು ಪರಿಷ್ಕರಣೆ ಮಾಡಲು ಅವಕಾಶ ನೀಡಲಾಗಿದ್ದು, ಇದಲ್ಲದೇ ಬಡ್ಡಿ ರಿಯಾಯಿತಿಯನ್ನು ಸಹ ನೀಡಲಾಗಿದೆ. ಆದರೂ ಮರುಪಾವತಿಗೆ ಮುಂದಾಗದೆ ಇರುವದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಂತಹ ಸಾಲಗಾರರು ಮರುಪಾವತಿಗೆ ಆಸಕ್ತಿ ತೋರಿದರೆ, ರೈತರ ನೈಜ ಸಮಸ್ಯೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು ಮತ್ತು ಶಿಫಾರಸ್ಸು ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಇದಲ್ಲದೇ ಸಾಲ ಹೊಂದಿರುವ ಬೆಳೆಗಾರರು ಸ್ವ ಇಚ್ಚೆಯಿಂದ ಒ.ಟಿ.ಎಸ್ (ಒಂದೇ ಬಾರಿ ಸಾಲ ಮರುಪಾವತಿ) ಯೋಜನೆಯಡಿ ಸಾಲ ಮರುಪಾವತಿಸಲು ಸಹ ಅವಕಾಶ ಕಲ್ಪಿಸುವ ಬಗ್ಗೆ ಬೆಳೆಗಾರರ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳ ಲಾಗುವದು ಎಂದು ನಾಣಯ್ಯ ತಿಳಿಸಿದರು. ಇದಕ್ಕೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಪ್ರತಿಕ್ರಿಯಿಸಿ ಸಾಲದ ಅಸಲಿನಷ್ಟು ಮೊತ್ತವನ್ನು ಒ.ಟಿ.ಎಸ್.ನಲ್ಲಿ ನಿಗದಿ ಮಾಡಿದರೆ, ಸಾಲ ಮರು ಪಾವತಿಸಲು ಸಾಮಥ್ರ್ಯವಿರುವ ಬೆಳೆಗಾರರು ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೂಪೇ ಕಾರ್ಡ್ ಯೋಜನೆಯು ಸರ್ಕಾರದ ಯಾವದೇ ಸಹಾಯಧನ, ಸೌಲಭ್ಯಗಳು ರೈತನ ಖಾತೆಗೆ ಜಮೆಯಾಗಬೇಕೆಂಬ ಚಿಂತನೆಯಿಂದ ಮಾಡಿದ್ದಾಗಿದೆ. ಇದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸಾಲ ಪಡೆಯುವ ಹಾಗೂ ಮರುಪಾವತಿಸುವ ಯಾವದೇ ವ್ಯವಹಾರಕ್ಕೆ ತೊಂದರೆಯಿಲ್ಲ. ಈ ಬಗ್ಗೆ ರೈತರಲ್ಲಿರುವ ಸಂದೇಹವನ್ನು ನಿವಾರಿಸಲು ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುವದೆಂದು ತಿಳಿಸಿದರು.

ಬೆಳೆಗಾರರ ಒಕ್ಕೂಟದ ಪರವಾಗಿ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮತ್ತಿತರರು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ಮನವಿ ಸಲ್ಲಿಸಿದರು. ಸಭೆಯಲ್ಲಿ ವೀರಾಜಪೇಟೆ ಬ್ಲಾಕ್ ಬ್ಯಾಂಕ್‍ಗಳ ಶಾಖಾ ವ್ಯವಸ್ಥಾಪಕರು ಹಾಜರಿದ್ದರು. ವೇದಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಜು ಜಾರ್ಜ್, ವಿಷಯ ತಜ್ಞ ಪ್ರಭಾಕರ್ ಉಪಸ್ಥಿತರಿದ್ದರು.