ವೀರಾಜಪೇಟೆ, ಜ. 19: ಅಂಗಡಿ ಹೋಟೆಲ್ಗಳಲ್ಲಿ ಸಿ.ಸಿ.ಕ್ಯಾಮರಗಳನ್ನು ಅಳವಡಿಸಬೇಕು. ರಾತ್ರಿ ವೇಳೆಯಲ್ಲಿ ಹೊರಗೆ ಹೋಗುವಾಗ ಅಂಗಡಿ ಮಳಿಗೆ ಹಾಗೂ ಮನೆಯ ಬಾಗಿಲನ್ನು ಭದ್ರವಾಗಿ ಹಾಕಬೇಕು. ಅಪರಿಚಿತ ವ್ಯಕ್ತಿಗಳು ಕಂಡಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ವೀರಾಜಪೇಟೆ ಸರ್ಕಲ್ ಇನ್ಸ್ಪ್ಯೆಕ್ಟರ್ ಎನ್.ಕುಮಾರ್ ಆರಾಧ್ಯ ಹೇಳಿದರು.
ಅಮ್ಮತ್ತಿಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದೆ ಅಮ್ಮತ್ತಿಯಲ್ಲಿ ಜೀಪ್ ಕಳವಾಗಿದ್ದು ಅದನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂದಿಸಲಾಗಿದೆ. ಇತ್ತೀಚೆಗೆ ಮನೆ ಕಳ್ಳತನವಾಗಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ. ಈಗಾಗಲೇ ಅಮ್ಮತ್ತಿ ವ್ಯಾಪ್ತಿಗೆ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ರಾತ್ರಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ರಾತ್ರಿ ಹೊತ್ತು ಮನೆಯ ಬಳಿ ವಾಹನದ ಪಾರ್ಕ್ ಮಾಡುವಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಮಾಡಬೇಕು. ಚಿನ್ನ ಆಭರಣಗಳಿದ್ದಲ್ಲಿ ಬ್ಯಾಂಕ್ಗಳಲ್ಲಿ ಭದ್ರಪಡಿಸಬೇಕು. ವಾಹನಗಳನ್ನು ಚಾಲನೆ ಮಾಡುವಾಗ ಪರವಾನಗಿ ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ವಾಹನ ಚಾಲನೆ ಸಂದರ್ಭ ಮದ್ಯಪಾನ -ಮೊಬೈಲ್ ಬಳಸಬಾರದು. ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ ಪ್ರಯಾಣಿಕರನ್ನು ಸಾಗಿಸುವ ಸಂದರ್ಭ ಅಪಘಾತವಾದಲ್ಲಿ ಯಾವದೇ ಪರಿಹಾರ ದೊರಕುವದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಚೇಂಬರ್ ಆಫ್ ಕಾಮಾರ್ಸ್ನ ಸುವಿನ್ ಗಣಪತಿ ಅವರು ಮಾತನಾಡಿ ಅಮ್ಮತ್ತಿ ಪ್ರೌಢಶಾಲಾ ಕಟ್ಟಡದ ಬಳಿ ಕೆಲವರು ಮದ್ಯಪಾನ ಸೇವಿಸಿ ಕುಳಿತ್ತಿರುತ್ತಾರೆ ಇದರಿಂದ ಕಳ್ಳತನ ಹೆಚ್ಚಾಗಬಹುದು ಹಾಗೂ ಇನ್ನು ಕೆಲವರು ದ್ವಿಚಕ್ರ ವಾಹನದಲ್ಲಿ ಮೂರು ಜನರು ಒಡಾಡುತ್ತಾರೆ ಇವರ ಬಗ್ಗೆ ಪೊಲೀಸ್ ಇಲಾಖೆ ನಿಗವಹಿಸಬೇಕು ಎಂದಾಗ ಸಭೆಯಲ್ಲಿದ್ದ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜನ ಸಂಪರ್ಕ ಸಭೆಯಲ್ಲಿ ಅಮ್ಮತ್ತಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.