ಶನಿವಾರಸಂತೆ, ಜ. 18: ಜಿಲ್ಲೆಯಲ್ಲೇ ವಿಸ್ತಾರವಾದ ಸುಳುಗಳಲೆ ಕಾಲೋನಿಯ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಮೀಪದ ಸುಳುಗಳಲೆ ಕಾಲೋನಿಯ ಹಿಂದೂ ರುದ್ರಭೂಮಿಗೆ ಉಸ್ತುವಾರಿ ಸಚಿವರ ರೂ. 10 ಲಕ್ಷ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ, ತಡೆಗೋಡೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶನಿವಾರಸಂತೆಯ ಅಭಿವೃದ್ಧಿಗೆ ರೂ. 4 ಲಕ್ಷ 95 ಸಾವಿರ ಅನುದಾನ ಕೊಡುವದು ಬಾಕಿ ಉಳಿದಿದೆ. ಉದ್ಯಾನವನ ನಿರ್ಮಿಸುವದಾದರೆ ಆ ಅನುದಾನ ಕೊಡಲಾಗುವದು ಎಂದು ಶಾಸಕರು ಭರವಸೆ ನೀಡಿದರು.ವಕೀಲ ಹಾಗೂ ಕಾಂಗ್ರೆಸ್ ರಾಜ್ಯ ಮುಖಂಡ ಚಂದ್ರಮೌಳಿ ಮಾತನಾಡಿ, ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತಾವು ಸಹಾಯ- ಸಹಕಾರ ನೀಡುವ ಭರವಸೆ ನೀಡಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ರುದ್ರಭೂಮಿಗೆ ಕಾವಲುಗಾರರ ಕೊಠಡಿ ನಿರ್ಮಿಸಿಕೊಡುವದಾಗಿ ತಿಳಿಸಿದರು. ಜಿ.ಪಂ. ಸದಸ್ಯ ಪುಟ್ಟರಾಜ್ ಮಾತನಾಡಿ, ಜಿ.ಪಂ.ಯಿಂದ ದೊರೆಯುವ ಅನುದಾನ ದೊರಕಿಸಿ, ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡುವದಾಗಿ ತಿಳಿಸಿದರು.ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಶಿವಪ್ಪ, ದಿವಾಕರ್, ಚಂದ್ರಶೇಖರ್ ಮಾತನಾಡಿದರು. ಜಿ.ಪಂ.ಸದಸ್ಯೆ ಸರೋಜಮ್ಮ, ಪ್ರಮುಖರಾದ ಎಸ್.ಎನ್. ರಘು, ರಂಗಸ್ವಾಮಿ, ಮಹೇಶ್, ರಂಜನ್, ಕೆ.ಪಿ. ಜಯಕುಮಾರ್, ಎನ್.ಕೆ. ಸುಮತಿ, ಆದಿತ್ಯ, ನೇತ್ರಾವತಿ, ಸೌಭಾಗ್ಯಲಕ್ಷ್ಮಿ, ಅಬ್ಬಾಸ್, ಉಷಾ, ಹೇಮಾವತಿ, ಹರೀಶ್, ಧನಂಜಯ್, ವೇದಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.