ಮಡಿಕೇರಿ, ಜ. 18: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಆಗಾಗ್ಗೆ ನಗರದ ವೃತ್ತಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದುದನ್ನು ಸಹಿಸದ ಗೃಹ ರಕ್ಷಕ ದಳದ ಯುವತಿಯೋರ್ವಳು ಆತನಿಗೆ ಸಾರ್ವಜನಿಕವಾಗಿಯೇ ತಕ್ಕ ಶಾಸ್ತಿ ಮಾಡಿದ ಪ್ರಸಂಗ ಇಂದು ನಡೆಯಿತು.
ನೀರುಕೊಲ್ಲಿ ನಿವಾಸಿ ಎಲ್ಯಣ್ಣ (ಬಾಬು) ಎಂಬ ವ್ಯಕ್ತಿ ಆಗಾಗ್ಗೆ ಮದ್ಯ ಸೇವಿಸಿಕೊಂಡು ಬಂದು ಮಹಿಳಾ ಸಿಬ್ಬಂದಿಗಳನ್ನು ನಿಂದಿಸುವ ಪರಿಪಾಠ ಬೆಳೆಸಿಕೊಂಡಿದ್ದ. ಇಂದೂ ಕೂಡ ನಗರಸಭೆ ಬಳಿ ಇರುವ ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಸೋಮವಾರಪೇಟೆಯವಳಾದ ಗೃಹರಕ್ಷಕ ದಳದ ಸಿಬ್ಬಂದಿ ಮಂಗಳ ಎಂಬಾಕೆ ಕರ್ತವ್ಯದಲ್ಲಿದ್ದಾಗ ಈತ ಬಂದು ನಿಂದಿಸತೊಡಗಿದ್ದಾನೆ.
ಮೊದಲೇ ‘ಟ್ರಾಫಿಕ್’ ಕಿರಿಕಿರಿಯಿಂದ ಬಸವಳಿದಿದ್ದ ಆಕೆ ಹಾಗೂ ಆಕೆಯ ತಾಯಿಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಮಂಗಳ ಆತನ ಕೊರಳಪಟ್ಟಿ ಹಿಡಿದು ಬಾರಿಸಿದ್ದಾಳೆ. ಆಕೆಯ ಪೆಟ್ಟು ಜಾಸ್ತಿಯಾಗುತ್ತಿದ್ದಂತೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಆತನನ್ನು ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಸಿನಿಮೀಯದಲ್ಲಿ ನಡೆಯುತ್ತಿದ್ದ ಘಟನೆ ಅನಿರೀಕ್ಷಿತವಾಗಿ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿದಂತಿತ್ತು.
ಮಂಗಳ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.