ಸೋಮವಾರಪೇಟೆ, ಜ. 18: 2017-18ನೇ ಸಾಲಿನ ಜಿಲ್ಲಾ ಮಟ್ಟದ ಯುವಜನಮೇಳ ಕಾರ್ಯಕ್ರಮ ತಾ.21ರ ಶನಿವಾರ ನೇಗಳ್ಳೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ವೀರಭದ್ರೇಶ್ವರ ಯುವಕ ಸಂಘದ ಅಧ್ಯಕ್ಷ ಎನ್.ಎಂ. ದಿವಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ನೇಗಳ್ಳೆ ಗ್ರಾಮದ ಶ್ರೀ ವೀರಭದ್ರೇಶ್ವರ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮೇಳ ನಡೆಯಲಿದೆ.

ಯುವಕ ಮತ್ತು ಯುವತಿಯರಿಗೆ ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಕೋಲಾಟ, ಜಾನಪದ ನೃತ್ಯ, ಭಜನೆ, ಜನಪದ ಗೀತೆ ನಡೆಯಲಿದೆ. ಯುವತಿಯರಿಗೆ ರಾಗಿ ಬೀಸುವ ಪದ, ಸೋಭಾನೆ ಪದ ಮುಂತಾದ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.

ಅಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್,ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಎಂ.ಪಿ. ಶಶಿ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಮಾಜಿ ಸಚಿವ ಬಿ.ಎ.ಜೀವಿಜಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದಾರೆ. ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ, ಕೊತ್ತನಳ್ಳಿ ಅರುಣ್ ಕಾಳಪ್ಪ, ವಿ.ಎಂ. ವಿಜಯ, ಸಂಕೇತ್ ಪೂವಯ್ಯ ಎ.ಎಸ್. ರಾಮಣ್ಣ, ನಾಪಂಡ ಮುತ್ತಪ್ಪ, ಕೆ.ಎಂ. ಲೋಕೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ 9481772110, 9483835674 ಸಂಪರ್ಕಿಸಲು ಕೋರಿದ್ದಾರೆ. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂದ್ರ ಪ್ರಸಾದ್, ಸಜ್ಜನ್, ಮಧು, ಗಗನ, ಹರೀಶ್ ಮತ್ತಿತರರು ಇದ್ದರು.