ಮಡಿಕೇರಿ, ಜ. 18 :ಇತ್ತೀಚಿನ ದಿನಗಳಲ್ಲಿ ಕೊಡಗಿನ ಅಭಿವೃದ್ಧಿಗೆ ಮಾರಕವಾಗುವ ರೀತಿಯಲ್ಲಿ ಜಾತಿ ಆಧಾರಿತ ರಾಜಕೀಯ ನಡೆಯುತ್ತಿದೆ ಎಂದು ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಆಧಾರದಲ್ಲಿ ಟಿಕೆಟ್ ಬೇಡಿಕೆ ಇಡುವದರ ವಿರುದ್ಧ ಜನ ಜಾಗೃತಿ ಮೂಡಿಸಲು ತಾ. 21 ರಂದು ತಲಕಾವೇರಿಯಿಂದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರು ಭಾರತೀಯರು ಎನ್ನುವ ಮನೋಭಾವನೆಯನ್ನು ಸೃಷ್ಟಿಸುವ ಅಗತ್ಯವಿದ್ದು, ಇದಕ್ಕೆ ಅಡ್ಡಿಯಾಗಿರುವ ಜಾತಿ ಆಧಾರಿತ ರಾಜಕಾರಣಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ಕೇವಲ ಕೊಡವ ಹಾಗೂ ಗೌಡ ಜನಾಂಗದವರು ಚುನಾವಣೆಗೆ ಟಿಕೆಟ್ ಪಡೆಯಬೇಕೆನ್ನುವ ಬಯಕೆ ಅರ್ಥಹೀನವೆಂದ ಅವರು ರಾಜಕೀಯ ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸುವ ಸೂಕ್ತ ವ್ಯಕ್ತಿಗಳಿಗೆ ಜಾತಿ ರಹಿತವಾಗಿ ಟಿಕೆಟ್ ನೀಡಬೇಕೆಂದರು. ಜಾತಿ ಆಧಾರದಲ್ಲಿ ಕೊಡಗಿನ ಜನತೆಯನ್ನು ಒಡೆಯುವ ಕೆಲಸ ನಡೆಯುತ್ತಿದ್ದು, ಸಾಮರಸ್ಯಕ್ಕೆ ಇದು ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದರು. ರಾಷ್ಟ್ರ, ರಾಜ್ಯ , ಜಿಲ್ಲೆ, ನೆಲ, ಜಲ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ತೋರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ತಾ. 21 ರಂದು ಬೆಳಿಗ್ಗೆ 8 ಗಂಟೆಗೆ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಿಂದ ಮಡಿಕೆÉೀರಿಯ ಶ್ರೀಓಂಕಾರೇಶ್ವರ ದೇವಸ್ಥಾನದವರೆಗೆ ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜನಪರ ಹೋರಾಟ ಸಮಿತಿಯ ಖಜಾಂಚಿ ಧನಂಜಯ್ ಹಾಗೂ ಸದಸ್ಯ ಸೋಮೇಶ್ ಉಪಸ್ಥಿತರಿದ್ದರು.