ಗೋಣಿಕೊಪ್ಪಲು,ಜ.18: ಭಾರತದ ಕಾಫಿ ತೋಟಗಳ ನಿರ್ವಹಣೆ ಬಗ್ಗೆ ಬೆಳೆಗಾರರ ಆಸಕ್ತಿ ಕಡಿಮೆಯಾಗುತ್ತಿದ್ದು, ಹೋಮ್ ಸ್ಟೇ, ರೆಸಾರ್ಟ್ ಇತ್ಯಾದಿ ಚಟುವಟಿಕೆಗಳಿಗಾಗಿ ಕಾಫಿ ತೋಟ ತೆರವು ಮಾಡುತ್ತಿರುವ ಹಿನ್ನೆಲೆ ಇಲ್ಲಿನ ಪ್ರದೇಶಗಳು ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಕಾಫಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆ ಎಂದು ಕಾಫಿ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಶ್ರೀವತ್ಸಕೃಷ್ಣ ವಿಷಾದ ವ್ಯಕ್ತಪಡಿಸಿದರು. ಇಲ್ಲಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ಕಾಫಿ ಹಬ್ಬದಲ್ಲಿ ಪಾಲ್ಗೊಂಡ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತದ ಕಾಫಿ ಉದ್ಯಮ ಚೇತರಿಕೆ, ವಿಶ್ವಮಾರುಕಟ್ಟೆಯಲ್ಲಿ ಇಲ್ಲಿನ ಕಾಫಿಯ ಪರಿಚಯಿಸಲು ಎಲ್ಲ ಸಣ್ಣ-ದೊಡ್ಡ ಬೆಳೆಗಾರರ ಸಹಕಾರವೂ ಅಗತ್ಯವಿದೆ. ಇನ್ನು ಮುಂದೆ ಕೇಂದ್ರ ಸರ್ಕಾರ ಯಾವದೇ ಮಾದರಿಯ ಸಹಾಯಧನವನ್ನೂ ನೀಡಲು ಸಾಧ್ಯವಿಲ್ಲ ಎಂದು ತಮ್ಮ ನಿಲುವನ್ನು ಪುನರುಚ್ಛರಿಸಿದ ಅವರು, ‘ಕ್ಯಾನ್ಸರ್‍ಗೆ ಬ್ಯಾಂಡೆಜ್’ ಕಟ್ಟಿದರೆ ಗುಣವಾಗುವದಿಲ್ಲ. ಕಾಫಿ ಪ್ರದೇಶಗಳು ಕಡಿಮೆಯಾಗುತ್ತಿರುವಾಗ ಸಬ್ಸಿಡಿ ನೀಡಿ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಭಾರತದ ಕಾಫಿ ಕೃಷಿಕರು ಉತ್ತಮ, ಗುಣಮಟ್ಟದ ಕಾಫಿ ಉತ್ಪಾದನೆಗೆ ಮುಂದಾಗಬೇಕು. ಈ ಹಿಂದೆ ಜಪಾನ್‍ಗೆ ಭಾರತ ದೇಶದಿಂದ ರಾಸಾಯನಿಕ ಮಿಶ್ರಿತ, ಕಳಪೆ ಗುಣಮಟ್ಟದ ಕಾಫಿ ರಫ್ತು ಮಾಡಲಾದ ಹಿನ್ನೆಲೆ ಭಾರತದ ಕಾಫಿಯನ್ನು ಮುಂದೆ ತಿರಸ್ಕರಿಸಲಾಯಿತು. ಭಾರತದ ಕಾಫಿ ದರ ಕುಸಿತಕ್ಕೆ ಇದೂ ಕಾರಣವಾಗಿದೆ ಎಂದು ನುಡಿದರು. ಕಾಫಿ ಮಂಡಳಿಯು ಜಾಗತಿಕ ಮಟ್ಟದಲ್ಲಿ ಕಾಫಿ ಮಾರಾಟವನ್ನು ಹೆಚ್ಚಿಸಲು ಸಹಕಾರ ನೀಡಲಿದೆ. ಕಾಫಿ ಪ್ರವಾಸೋದ್ಯಮ ಸಂದರ್ಭ ವಿದೇಶಿ ಪ್ರವಾಸಿಗರಿಗೆ ಉತ್ತಮ ಕಾಫಿ ತಯಾರಿಸಿ, ನೀಡಿದಲ್ಲಿ ಆಯಾಯ ತೋಟದ ಕಾಫಿಗೆ ವಿಶ್ವಮಾರುಕಟ್ಟೆಯಲ್ಲಿ ಬೇಡಿಕೆ ಸಾಧ್ಯವಿದೆ. ಮೌಲ್ಯಾಧಾರಿತ ಕಾಫಿ ಉದ್ಯಮವನ್ನು ಅಭಿವೃದ್ಧಿಪಡಿಸಲು ಇನ್ನು ಮುಂದೆ ಕಾಫಿ ಮಂಡಳಿ ಸಹಕಾರ ನೀಡಲಿದೆ ಎಂದರು.

ವಿಶ್ವ ಮಾರುಕಟ್ಟೆಯಲ್ಲಿ ಕಾಫಿ ದರದ ಕುಸಿತಕ್ಕೆ ಏನೂ ‘ಮ್ಯಾಜಿಕ್’ ಮಾಡುವ ಮೂಲಕ ಬೆಲೆ ಏರಿಸಲು ಸಾಧ್ಯವಿಲ್ಲ. ಕಾಫಿ ಉತ್ಪಾದನೆಯನ್ನು ಸವಾಲಾಗಿ ಸ್ವೀಕರಿಸಿ, ಕನಿಷ್ಟ ಹೆಕ್ಟೇರ್‍ಗೆ 1000 ಕೆ.ಜಿ.ಉತ್ಪಾದನೆ ಮಾಡು ವಂತಾಗಬೇಕು. ಇದಕ್ಕೆ ಕಾಲ ಕಾಲಕ್ಕೆ ಬೇಕಾದ ಸೂಕ್ತ ಸಲಹೆ, ಮಾರ್ಗದರ್ಶನ, ಸಹಕಾರವನ್ನು ಕಾಫಿ ಮಂಡಳಿ ನೀಡಲಿದೆ ಎಂದು ಮಾಹಿತಿ ನೀಡಿದರು. ಆಂತರಿಕ ಕಾಫಿ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಕಾಫಿ ಮಂಡಳಿ ಯೋಜನೆ ರೂಪಿಸಲಿದೆ ಎಂದು ಹೇಳಿದರಲ್ಲದೆ, ಈ ಹಂತದಲ್ಲಿ ವಾರ್ಷಿಕವಾಗಿ ಕಾಫಿ ರೋಸ್ಟಿಂಗ್ ಯಂತ್ರದ ಬಳಕೆ ಹೆಚ್ಚಿಸಲು, ಕೋಕಾಕೋಲಾ, ನೆಸ್ಲೆ ಇಂಡಿಯಾ ಇತ್ಯಾದಿ ಕಂಪನಿಗಳ ಸಹಕಾರ ದೊಂದಿಗೆ ಭಾರತದ ರುಚಿಕರ ಕಾಫಿಯನ್ನು ಆಂತರಿಕವಾಗಿ ಬಳಕೆ ಹೆಚ್ಚಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. - ಟಿ.ಎಲ್.ಶ್ರೀನಿವಾಸ್