ಶ್ರೀಮಂಗಲ, ಜ. 18: ಪ್ರಸಕ್ತ ಸಾಲಿನಲ್ಲಿ ಕಾಫಿ ಫಸಲು ಶೇ. 50ರಷ್ಟು ಕುಸಿತವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಾರುಕಟ್ಟೆ ದರ ಸಹ ಶೇ. 30ರಷ್ಟು ಕುಸಿದಿದೆ. ಕರಿಮೆಣಸು ದರ ಕಳೆದ ಒಂದು ವರ್ಷದಿಂದ ಶೇ. 40ರಷ್ಟು ಕುಸಿದಿದ್ದು, ಜಿಲ್ಲೆಯ ಬೆಳೆಗಾರರು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭ ಬ್ಯಾಂಕುಗಳು ಬೆಳೆಗಾರರ ಸಾಲ ಕಟ್ಟಲು ಬಲತ್ಕಾರ ಮಾಡುತ್ತಿದ್ದು, ನೊಟೀಸ್ ಜಾರಿ ಮಾಡುತ್ತಿದೆ. ಇನ್ನೊಂದು ಕಡೆ ನ್ಯಾಯಾಲಯದಲ್ಲಿಯೂ ಮೊಕದಮ್ಮೆ ದಾಖಲಿಸುತ್ತಿದೆ. ಇದನ್ನು ತಕ್ಷಣದಿಂದ ನಿಲ್ಲಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಲು ಬೆಳೆಗಾರರ ನಿಯೋಗ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವರಿಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ತ್ವರಿತ ಪರಿಹಾರೋಪಾಯದ ಯೋಜನೆಯನ್ನು ತರಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಗೋಣಿಕೊಪ್ಪ ಸಿಲ್ವರ್ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪ್ರಸಕ್ತ ಸಾಲಿನಲ್ಲಿ ಕಾಫಿ ಫಸಲಿನ ಬಗ್ಗೆ ಕಾಫಿ ಮಂಡಳಿಯು ಮುಂಗಾರು ಪೂರ್ವದಲ್ಲಿ ನಡೆಸಿದ ಸಮೀಕ್ಷೆಯಂತೆ ಭಾರತದಲ್ಲಿ 3.70ಲಕ್ಷ ಟನ್ ಕಾಫಿ ಉತ್ಪಾದನೆಯ ವರದಿ ಸಲ್ಲಿಸಿತು. ಮುಂಗಾರು ನಂತರ ಕಾಫಿ ಮಂಡಳಿ ನಡೆಸಿದ ಕಾಫಿ ಬೆಳೆ ಸಮೀಕ್ಷೆಯಲ್ಲಿ 3.16 ಲಕ್ಷ ಟನ್ ಉತ್ಪಾದನೆ ಬಗ್ಗೆ ವರದಿ ಸಲ್ಲಿಸಿದೆ. ತನ್ನ 2ನೇ ವರದಿಯಲ್ಲಿ 54 ಸಾವಿರ ಟನ್ ಉತ್ಪಾದನೆ ಕುಸಿತವಾಗಿರುವದನ್ನು ಉಲ್ಲೇಖಿಸಿದೆ. ಕಾಫಿ ಬೆಳೆಯುವ ಪ್ರಮುಖ ಕೊಡಗು ಜಿಲ್ಲೆಯ ಪೂರ್ವ ಭಾಗದಲ್ಲಿ ಶೇ. 50ರಿಂದ 75ರಷ್ಟು ಕಾಫಿ ಫಸಲು ಕುಂಠಿತವಾಗಿದೆ. ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಕಾಫಿ ಬೆಳೆ ಇದೆ. ಬೆಳೆಗಾರರ ಒಕ್ಕೂಟದ ಅಂದಾಜಿನಂತೆ ದೇಶದ ಕಾಫಿ ಉತ್ಪಾದನೆ ಪ್ರಸಕ್ತ ವರ್ಷ 2.5 ರಿಂದ 2.6 ಲಕ್ಷ ಟನ್ಗಿಂತ ಕಡಿಮೆಯಾಗಲಿದೆ.
ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದು, ಕಾಫಿ ತೋಟ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಫಿ ಹಾಗೂ ಕರಿಮೆಣಸನ್ನೆ ಅವಲಂಬಿಸಿ ಜಿಲ್ಲೆಯ ಬೆಳೆಗಾರರು ಜೀವನ ಸಾಗಿಸುತ್ತಿದ್ದು, ಏಕ ಕಾಲದಲ್ಲಿ ಇವೆರಡು ಫಸಲಿನ ದರ ಹಾಗೂ ಉತ್ಪಾದನೆ ಕುಸಿತವಾಗಿ ಕಂಗಾಲಾಗಿರುವ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಆಮದು ಕರಿಮೆಣಸಿನಿಂದ ಕರಿಮೆಣಸು ದರ ತೀವ್ರವಾಗಿ ಕುಸಿತವಾಗಿದ್ದು ಕೊಡಗು ಬೆಳೆಗಾರರ ಒಕ್ಕೂಟ ಸೇರಿದಂತೆ ದ.ಭಾರತದ 16 ಬೆಳೆಗಾರರ ಸಂಘಟನೆಗಳು ಒಂದಾಗಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಕರಿಮೆಣಸು ಕನಿಷ್ಟ ಆಮದು ದರವನ್ನು ರೂ. 500ಕ್ಕೆ ನಿಗದಿ ಪಡಿಸಿದ್ದರೂ ಅದರ ಪ್ರಯೋಜನ ಬೆಳೆಗಾರರಿಗೆ ಲಭ್ಯವಾಗಿಲ್ಲ. ವ್ಯಾಪಾರಿಗಳು ಕೇಂದ್ರ ಸರಕಾರದ ಈ ನಿಯಮವನ್ನು ವ್ಯಾಪಾಕವಾಗಿ ದುರುಪಯೋಗಪಡಿಸಿ ಕೊಂಡು ಕಡಿಮೆ ದರ ಮತ್ತು ಕಳಪೆಮಟ್ಟದ ಕರಿಮೆಣಸನ್ನು ಭಾರತಕ್ಕೆ ತರುತ್ತಿದ್ದಾರೆ. ಆಮದು ಕರಿಮೆಣಸು ಪ್ರವೇಶಿಸುತ್ತಿರುವದಕ್ಕೆ ಕಟ್ಟುನಿಟ್ಟಾಗಿ ಕಡಿವಾಣ ಹಾಕದಿದ್ದರೆ ಕರಿಮೆಣಸು ಬೆಳೆಗಾರರು ಅತ್ಯಂತ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ದ.ಭಾರತದ ಎಲ್ಲ ಬೆಳೆಗಾರರ ಸಂಘಟನೆಗಳು ಒಂದಾಗಿ ಮುಂದಿನ ಕಾರ್ಯಯೋಜನೆಯನ್ನು ಚರ್ಚಿಸಿ ರೂಪಿಸಲು ನಿರ್ಧರಿಸಲಾಯಿತು.
ಕರಿಮಣಸಿನ ಮೇಲೆ ಸರಕಾರ ಶೇ. 1.5ರಷ್ಟು ಸೆಸ್ ಹಾಕುತ್ತಿದ್ದು, ಇದನ್ನು ಸ್ಥಗಿತಗೊಳಿಸಬೇಕು.ನೆರೆಯ ರಾಜ್ಯಗಳಲ್ಲಿ ಕರಿಮೆಣಸಿಗೆ ಯಾವುದೇ ಸೆಸ್ ಹಾಕುತ್ತಿಲ್ಲ ಎಂಬ ಬಗ್ಗೆ ಸರಕಾರಕ್ಕೆ ನಿಯೋಗ ತೆರಳಿ ಮನವರಿಕೆ ಮಾಡಲು ನಿರ್ಧರಿಸಲಾಯಿತು.
ದೇಶದಲ್ಲಿ ಅತಿ ಹೆಚ್ಚು ಕರಿಮೆಣಸು ಬೆಳೆಯುತ್ತಿದ್ದ ಕೇರಳವನ್ನು ಹಲವು ವರ್ಷದಿಂದ ಹಿಂದಿಕ್ಕಿರುವ ಕರ್ನಾಟಕ ರಾಜ್ಯ ಅತಿ ಹೆಚ್ಚು ಕರಿಮೆಣಸನ್ನು ಬೆಳೆಯುತ್ತಿದೆ. ಆದರೆ ಕೇರಳದ ಕೊಚ್ಚಿನ್ ಮೂಲಕವೇ ಕರಿಮೆಣಸು ವಹಿವಾಟು ನಡೆಯುವದರಿಂದ ಮಲಬಾರ್ ಪೆಪ್ಪರ್ ಹೆಸರಿನಲ್ಲಿ ಕೇರಳ ರಾಜ್ಯವೇ ಕರಿಮೆಣಸು ಉತ್ಪಾದನೆ ಮಾಡುತ್ತಿದೆ ಎಂಬ ತಪ್ಪು ವರದಿಯಿಂದ ಸಂಬಾರ ಮಂಡಳಿಯಿಂದ ದೊರೆಯುವ ಸಹಾಯಧನ ಹಾಗೂ ಇತರ ಉತ್ತೇಜಕ ಸೌಲಭ್ಯಗಳನ್ನು ಕೇರಳ ರಾಜ್ಯದ ಬೆಳೆಗಾರರೇ ಪಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆದು ನೈಜ ಕರಿಮೆಣಸು ಬೆಳೆಗಾರರಿಗೆ ದೊರಕಿಸಿಕೊಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.
12ನೇ ಪಂಚವಾರ್ಷಿಕ ಯೋಜನೆ ಮೂಲಕ ಕಾಫಿ ಬೆಳೆಗಾರರ ಕಾಫಿ ಅಭಿವೃದ್ಧಿಗೆ ದೊರೆಯುವ ಸಹಾಯಧನ 960 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಶೇ. 30ರಷ್ಟು ಮಾತ್ರ ವಿನಿಯೋಗವಾಗಿದೆ. ಉಳಿದ ಅನುದಾನ ಖರ್ಚಾಗಿಲ್ಲ. ಆದರೆ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಗೆ ನೀಡುವ ಸಹಾಯಧನವನ್ನು ಸ್ಥಗಿತಗೊಳಿಸಿದ್ದು, ಬಹಳಷ್ಟು ಫಲಾನುಭವಿಗಳ ಅರ್ಜಿ ಬಾಕಿ ಉಳಿದಿದೆ. ಆದ್ದರಿಂದ ಈ ಯೋಜನೆಯನ್ನು ಮುಂದುವರಿಸಲು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಪೈಸಾರಿ ಜಾಗದಲ್ಲಿ ಕಾಫಿ ತೋಟ ಮಾಡಿದ್ದು, ಇದನ್ನು ತೆರವುಗೊಳಿಸಲು ನ್ಯಾಯಾಲಯದ ಮೂಲಕ ನೋಟೀಸ್ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕೂಟದಿಂದ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸರ್ವೆ ಮಾಡಿ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಾಗವನ್ನು ವಿಂಗಡಿಸಿ, ನಂತರ ಇತ್ಯರ್ಥ ಪಡಿಸಲು ಸರ್ಕಾರ ಚಿಂತಿಸಿದೆ ಎಂದು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ ಬೆಳೆಗಾರರಿಗೆ ಯಾವದೇ ನೊಟೀಸ್ ಜಾರಿ ಮಾಡದಂತೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ .
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಸರಿ ಸುಬ್ಬಯ್ಯ, ಒಕ್ಕೂಟದ ಮಹಿಳಾ ಘಟಕದ ಪ್ರಮುಖರಾದ ಆಶಾ ಜೇಮ್ಸ್, ಚೇಂದಂಡ ಸುಮಿ ಸುಬ್ಬಯ್ಯ, ಕೊರಕುಟ್ಟಿರ ಸರ ಚಂಗಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಅರಮಣಮಾಡ ಸತೀಶ್ ದೇವಯ್ಯ, ಕೊಟ್ಟಂಗಡ ಕೆ. ಜೋಯಪ್ಪ, ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಎಸ್. ಮೋಹನ್ ಮಾದಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.