ಬೆಂಗಳೂರು, ಜ.18: ವಿಶ್ವದಾದ್ಯಂತ ಕಾಫಿ ಬೆಳೆಯುವ ಪ್ರದೇಶಗಳು ಕಡಿಮೆಯಾಗುತ್ತಿದ್ದು, 2050ನೇ ಇಸವಿ ವೇಳೆಗೆ ಜಾಗತಿಕ ಕಾಫಿ ಉತ್ಪಾದನೆಯಲ್ಲಿ ತೀವ್ರ ಕೊರತೆ ಎದುರಿಸಬೇಕಾಗಬಹುದು ಎಂದು ಅಂತರ್ರಾಷ್ಟ್ರೀಯ ಕಾಫಿ ಸಂಘಟನೆ ಉಪ ನಿರ್ದೇಶಕ, ಮೂಲತಃ ಬ್ರೆಜಿಲ್‍ನ ಜೋಸ್ ಸೆಟ್ಟೆ ಕಳವಳ ವ್ಯಕ್ತಪಡಿಸಿದರು. ಅದೃಷ್ಟವಶಾತ್ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಒಂದು ಹೆಕ್ಟೇರ್‍ನಲ್ಲಿ 500 ಕೆ.ಜಿ.ಕಾಫಿ ಬೆಳೆಯುತ್ತಿದ್ದ ಪ್ರದೇಶದಲ್ಲಿ 1200 ಕೆ.ಜಿ.ಕಾಫಿ ಬೆಳೆಯತೊಡಗಿರುವ ದರಿಂದ ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕ ಕಾಫಿ ಪೂರೈಕೆಯಾಗುತ್ತಿದೆ. ವಿಶ್ವದಲ್ಲಿ ಕಾಫಿ ಆಂತರಿಕ ಬಳಕೆಯಲ್ಲಿ ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಕೊನೆಯ ಸ್ಥಾನದಲ್ಲಿರುವದಾಗಿ ಅವರು ಮಾಹಿತಿ ನೀಡಿದರು.
ಇಂದು ಇಲ್ಲಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ, ಇಂಡಿಯಾ ಕಾಫಿ ಟ್ರಸ್ಟ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ಕಾಫಿ ಮಂಡಳಿ, ಟಾಟಾ ಕಾಫಿ ಸಂಸ್ಥೆ, ಯೂನಿಲೀವರ್ ಕಂಪೆನಿ. ನೆಸ್ಲೇ ಇಂಡಿಯಾ ಮುಂತಾದ ಕಂಪೆನಿಗಳ ಸಹಭಾಗಿತ್ವದಲ್ಲಿ ಜರುಗುತ್ತಿರುವ ಭಾರತ ಅಂತರ್ರಾಷ್ಟ್ರೀಯ 7ನೇ ಕಾಫಿ ಹಬ್ಬದ 3 ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆಂತರಿಕ ಕಾಫಿ ಬಳಕೆಯಲ್ಲಿ ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದು, ಇಥಿಯೋಪಿಯಾ(2), ಕೊಲಂಬಿಯಾ(3), ವಿಯಟ್ನಾಮ್(4), ಇಂಡೋನೇಶಿಯಾ(5) ಹಾಗೂ ಭಾರತ 6ನೇ ಸ್ಥಾನದಲ್ಲಿರುವದಾಗಿ ಮಾಹಿತಿ ನೀಡಿದರು.
ವಿಶ್ವದಲ್ಲಿ ಭಾರತ ಹತ್ತಿ ಉತ್ಪಾದನೆಯ ಪ್ರಮುಖ ರಾಷ್ಟ್ರ ಹಾಗೂ ಸುಂದರ ದೇಶ ಎಂದು ಗುರುತಿಸಿಕೊಂಡಿದೆ. ವಿಶ್ವಮಾರುಕಟ್ಟೆ ಯಲ್ಲಿ ಭಾರತ ಕಾಫಿ ಪ್ರಚಾರಕ್ಕೆ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ನುಡಿದ ಅವರು, ಕಳೆದ 20 ತಿಂಗಳಿನಲ್ಲಿ ವಿಶ್ವಮಾರುಕಟ್ಟೆಯಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ದರ ಇಳಿಮುಖವಾಗುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಬ್ರೇಜಿಲಿಯನ್ ಮೈಲ್ಡ್ ರೋಬಸ್ಟಾ, ಕೊಲಂಬಿಯನ್ ಮೈಲ್ಡ್ ಹಾಗೂ ಇತರೆ ಮೈಲ್ಡ್ ಕಾಫಿಗೆ ಮಾತ್ರ ಉತ್ತಮ ದರ ಲಭ್ಯವಾಗುತ್ತಿದೆ. ಜಾಗತಿಕ ವಿಶ್ವದಲ್ಲಿ ಅರೇಬಿಕಾ ಕಾಫಿಗೆ ಶೇ.80 ರಷ್ಟು ಬೇಡಿಕೆ ಇದ್ದರೆ, ರೋಬಸ್ಟಾ ಕಾಫಿಗೆ ಶೇ.20 ರಿಂದ 40 ರಷ್ಟು ಮಾತ್ರ ಬೇಡಿಕೆ ಇದೆ. 2000-2001ನೇ ಇಸವಿಯಿಂದ 2017 ರವರೆಗೆ ಭಾರತದ ಕಾಫಿ ಬೇಡಿಕೆ ಶೇ.30 ರಿಂದ ಶೇ.38ರವರೆಗೆ ಮಾತ್ರ ಏರಿಕೆ ಕಂಡಿದೆ. ಅರೇಬಿಕಾ ಶೇ.0.15 ಮಾತ್ರ ಏರಿಕೆ ಕಂಡಿದೆ. ಭಾರತ ಗ್ರೀನ್ ಕಾಫಿ ರಫ್ತುವಿನಲ್ಲಿ ಶೇ.63 ಸಾಧನೆ ಮಾಡಿದೆ. ಇಲ್ಲಿನ ಕಾಫಿ ಪ್ರದೇಶ ವಿಸ್ತರಣೆ ಅಗತ್ಯ. ಹೆಕ್ಟೇರಿಗೆ ಒಂದು ಟನ್ ಕಾಫಿ ಬೆಳೆಯುವದು ಅಗತ್ಯವಾಗಿದೆ. ಭಾರತದ ಕಾಫಿಯು ಜಾಗತಿಕ ತಾಪಮಾನ, ಬಿಳಿ ಕಾಂಡಕೊರಕ ಬಾಧೆಯೊಂದಿಗೆ ಗುಣಮಟ್ಟದ ಉತ್ಪಾದನೆ
(ಮೊದಲ ಪುಟದಿಂದ) ಮಾಡುವ ಅಗತ್ಯವಿದೆ ಎಂದು ಹೇಳಿದರು.
ಭಾರತದ ಕಾಫಿ ಆಂತರಿಕ ಬಳಕೆಯಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಂಡು ಬಂದಿದೆ. ಏಷಿಯಾದಲ್ಲಿ ಜಪಾನ್ ಅತ್ಯಧಿಕ ಕಾಫಿಯನ್ನು ಬಳಕೆ ಮಾಡುತ್ತಿದ್ದರೆ, ಇಂಡೋನೇಶಿಯಾ ದ್ವಿತೀಯ ಹಾಗೂ ಭಾರತ ತೃತೀಯ ಸ್ಥಾನದಲ್ಲಿದೆ. ಚೈನಾ ಕೊನೆಯ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ ಜೋಸ್ ಸೆಟ್ಟೆ ಅವರು, ಭಾರತದಲ್ಲಿ ಇನ್‍ಸ್ಟಂಟ್ ಕಾಫಿ ಬಳಕೆ ಅಧಿಕವಿದೆ ಎಂದು ಹೇಳಿದರು.ಇನ್‍ಸ್ಟಂಟ್ ಕಾಫಿಯನ್ನು ಜರ್ಮನಿ, ಇಟಲಿ, ಫ್ರಾನ್ಸ್, ಅಮೇರಿಕಾ ಹಾಗೂ ಜಪಾನ್ ದೇಶದಲ್ಲಿ ಅತ್ಯಧಿಕವಾಗಿ ಉಪಯೋಗಿಸಲಾಗುತ್ತದೆ ಎಂದು ವಿವರಿಸಿದರು.
ಅತ್ಯಧಿಕ ಮಳೆ, ಮಳೆಯ ಚಕ್ರದಲ್ಲಿ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಕಾಫಿ ಉತ್ಪಾದನೆಯಲ್ಲಿ ಸಮತೋಲನ ಸಾಧಿಸುವದು ಸವಾಲಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿಯೂ ಕಾಫಿ ರಕ್ಷಣೆಗೆ ದೀರ್ಘಾವಧಿ ಯೋಜನೆ ರೂಪಿಸಬೇಕಾಗಿದೆ. ಹೊಂಡೂರಾ, ಗ್ವಾಟೆಮಾಲಾ, ಸಾಲ್ವಡಾರ್, ಡೊಮಿನಿಕ್ ರಿಪಬ್ಲಿಕ್, ನಿಕರಾಗುವಾ ರಾಷ್ಟ್ರಗಳಲ್ಲಿ ಕಾಫಿ ಎಲೆ ತುಕ್ಕು ರೋಗ
(ಲೀಫ್ ರಸ್ಟ್) ಕಾಣಿಸಿಕೊಂಡಿದ್ದು, ಭಾರತದಲ್ಲಿ ಕಂಡು ಬಂದಿಲ್ಲ. ಭಾರತದಲ್ಲಿ ಗ್ರಾಮೀಣ ಭಾಗದ ಯುವಕರು ಕೃಷಿಯಲ್ಲಿ ನಿರಾಸಕ್ತಿ ಹೊಂದಿರುವದು, ಭೂ ಮಾಲೀಕರ ನಿರುತ್ಸಾಹದಿಂದಾಗಿ ಕಾಫಿ ಉತ್ಪಾದನೆ ಕುಸಿತ ಕಾಣುತ್ತಿರುವದಾಗಿ ಅಭಿಪ್ರಾಯಪಟ್ಟರು.
ಭಾರತದ ಕಾಫಿ ಉದ್ಯಮ ಚೇತರಿಕೆಗೆ ಮುಂದೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕಾಫಿ ಸಸಿಯ ಅಭಿವೃದ್ಧಿ, ರೋಗ ಹತೋಟಿಗೆ ಕ್ರಮ, ತಾಪಮಾನದಿಂದ ಪರಿಣಾಮ ಬೀರದಂತೆ ಅಗತ್ಯ ಕ್ರಮ ಇತ್ಯಾದಿಗಳೊಂದಿಗೆ ಕಾಫಿ ಬೆಳೆಗಾರರು ಸವಾಲಾಗಿ ಸ್ವೀಕರಿಸಿದ್ದಲ್ಲಿ ಮಾತ್ರ ಕಾಫಿ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದಾಗಿದೆ ಎಂದು ವಿವರಿಸಿದರು.
-ಟಿ.ಎಲ್.ಶ್ರೀನಿವಾಸ್