ಮಡಿಕೇರಿ, ಜ. 18: ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಉದ್ಯಾನ ಬಳಿ ತಳ್ಳುಗಾಡಿ, ಮೇಜು ಗಳನ್ನಿಟ್ಟುಕೊಂಡು ಚುರುಮುರಿ, ಕಡಲೆ ಇನ್ನಿತರ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ಬೀದಿ ವ್ಯಾಪಾರಿಗಳನ್ನು ನಗರಸಭೆ ಏಕಾಏಕಿ ತೆರವುಗೊಳಿಸಿರು ವದನ್ನು ವಿರೋಧಿಸಿ ಇಂದು ಬೀದಿ ವ್ಯಾಪಾರಿಗಳು ಹಾಗೂ ಕುಟುಂಬದವರು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜಾಸೀಟ್ ಆಸು-ಪಾಸಿನಲ್ಲಿ ಬೀದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಳವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಲಿರುವದರಿಂದ ಆಯುಕ್ತರ ಸೂಚನೆ ಮೇರೆಗೆ ಸಿಬ್ಬಂದಿ ಗಳು ಅಂಗಡಿಗಳನ್ನು ತೆರವುಗೊಳಿಸಿ ದ್ದರು. ಯಾವದೇ ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವದನ್ನು ಖಂಡಿಸಿ ವ್ಯಾಪಾರಿಗಳು ಇಂದು ಪ್ರತಿಭಟನೆಗಿಳಿದರು. ಈ ಪೈಕಿ ಆರು ಮಂದಿ ವ್ಯಾಪಾರಿಗಳಿಗೆ ನಗರಸಭೆಯಿಂದಲೇ ಬೀದಿ ವ್ಯಾಪಾರ ಮಾಡಲು ಅನುಮತಿ ಸಹಿತ ಗುರುತಿನ ಪತ್ರ ನೀಡಿದ್ದರೂ, ತೆರವುಗೊಳಿಸಿದ ಬಗ್ಗೆ ಆಕ್ಷೇಪಿಸಿದರು.

ಪ್ರತಿಕ್ರಿಯಿಸಿದ ಆಯುಕ್ತೆ ಶುಭ, ಕಂದಾಯ ನಿರೀಕ್ಷಕ ರಮೇಶ್, ಅವರುಗಳು ಅನುಮತಿ ಚೀಟಿಯಲ್ಲಿ ನಿರ್ದಿಷ್ಟ ಸ್ಥಳ ನಿಗದಿಪಡಿಸಿಲ್ಲ. ನಗರದ ಯಾವದೇ ಜಾಗದಲ್ಲಾದರೂ ವ್ಯಾಪಾರ ಮಾಡಬಹುದಾಗಿದೆ. ಆದರೆ ರಾಜಾಸೀಟ್‍ನಲ್ಲಿ ಪ್ರವಾಸಿಗರ, ವಾಹನಗಳ ದಟ್ಟಣೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗದು. ಕಾನೂನು ಪ್ರಕಾರ ಉದ್ಯಾನದೊಳಗೆ ವ್ಯಾಪಾರ ಮಾಡುವಂತಿಲ್ಲ ಎಂದು ಹೇಳಿದರು.

ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ, ಜುಲೇಕಾಬಿ, ಅಮೀನ್ ಮೊಹಿಸಿನ್, ಮನ್ಸೂರ್, ಕೆ.ಜೆ. ಪೀಟರ್, ಅರುಣ್ ಶೆಟ್ಟಿ ಅವರುಗಳು ಮಾನವೀಯ ನೆಲೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಮಾತುಕತೆ ನಡೆಸಿದರು.

ಪ್ರತಿಕ್ರಿಯಿಸಿದ ಆಯುಕ್ತರು ಕಾರ್ಡ್ ಹೊಂದಿದವರಿಗೆ ಮಾತ್ರ ರಾಜಾಸೀಟ್ ಬಳಿ ಅವಕಾಶ ನೀಡಲಾಗುವದು. ಆದರೂ ಕಾನೂನು ಪ್ರಕಾರ ಮತ್ತೆ ತೆರವುಗೊಳಿಸುವ ಅನಿವಾರ್ಯತೆ ಎದುರಾಗಬಹುದೆಂಬ ಮುನ್ಸೂಚನೆ ನೀಡಿದರು.

ಈ ಸಂದರ್ಭ ಸದಸ್ಯರುಗಳು ಕಾರ್ಡ್ ಇಲ್ಲದ ವ್ಯಾಪಾರಿಗಳಿಗೆ ನಗರದ ಬೇರೆ ಕಡೆಗಳಲ್ಲಿ ವ್ಯಾಪಾರ ಮಾಡಿಕೊಳ್ಳುವಂತೆ ಮನವೊಲಿಸಿ ದರಾದರೂ ವ್ಯಾಪಾರಿಗಳು ಗಾಂಧಿ ಮೈದಾನದ ಬಳಿ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಕೊಡುವಂತೆ ಅಂಗಲಾಚಿದ ಮೇರೆಗೆ ತಾತ್ಕಾಲಿಕವಾಗಿ ಗಾಂಧಿ ಮೈದಾನದ ಬಳಿಯ ರಸ್ತೆ ಬದಿ ವ್ಯಾಪಾರ ಮಾಡಿಕೊಳ್ಳುವಂತೆ ಮೌಖಿಕವಾಗಿ ಹೇಳಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.