ಮಡಿಕೇರಿ, ಜ. 18: ಭಾರತದ ಯೋಗ, ಆಯುರ್ವೇದ ಹಾಗೂ ಎಣಿಕೆಯ ಕ್ರಮದಿಂದಾಗಿ ಜಗತ್ತಿಗೆ ಒಳಿತಾಗಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಜ್ಞಾ ಪ್ರವಾಹ ಕ್ಷೇತ್ರೀಯ ಸಂಯೋಜಕ ರಘುನಂದನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾರ್ಯಪ್ಪ ಕಾಲೇಜಿನ ಸಭಾಂಗಣ ದಲ್ಲಿ ನಡೆದ ಯುವ ಸಪ್ತಾಹ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ದೇವರೊಬ್ಬನೇ ನಾಮ ಹಲವು, ಯಾರಿಗೆ ಪೂಜೆ ಮಾಡಿದರೂ ಅದು ಒಬ್ಬನಿಗೆ ಸಲ್ಲುತ್ತದೆ. ದೇವರ ಮೇಲೆ ಭಾರ ಹಾಕಿ ಸಮಾಜಮುಖಿ ಕೆಲಸ ಮಾಡುವ ಚಿಂತನೆ ಅಗತ್ಯ. ಯಹೂದಿಗಳು ಸೇರಿದಂತೆ ಹಲವು ವಿದೇಶಿಯರಿಗೆ ಆಶ್ರಯ ಕೊಟ್ಟ ದೇಶ ಭಾರತ. ಭಾರತಮಾತೆಯನ್ನು ಪೂಜಿಸಿ ಎಂದು ಕರೆ ನೀಡಿದ್ದು ಸ್ವಾಮಿ ವಿವೇಕಾನಂದರು. ಭಾರತವನ್ನು ವಿದೇಶದಲ್ಲಿ ಸರಿಯಾದ ರೀತಿಯಲ್ಲಿ ಪರಿಚಯಿಸಿದರು. ವಿದೇಶಿಯರಿಗೂ ಭಾರತದಲ್ಲಿ ಮಣ್ಣಾಗಬೇಕು, ಮತ್ತೆ ಭಾರತದಲ್ಲಿ ಹುಟ್ಟಬೇಕು ಅಂತ ಪ್ರೇರಣೆ ನೀಡಿದರು. ಸ್ವಾಮಿ ವಿವೇಕಾನಂದರು ಮಹಾತ್ಮರ ಜಯಂತಿ ಆಚರಣೆಗಳಿಂದ ಪ್ರೇರಣೆ ನಮ್ಮ ಉದ್ಧಾರ ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಯುವ ಸಪ್ತಾಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆ ಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭ ಕಳೆದ 7 ದಿನಗಳಿಂದ ಯುವ ಸಪ್ತಾಹದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಸಿಬ್ಬಂದಿ ಬಿ.ಬಿ. ಮಹೇಶ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಶೇವಿರೆ ಹಾಗೂ ಇತರರಿದ್ದರು.

ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ ಪ್ರಾರ್ಥಿಸಿ, ಉಪನ್ಯಾಸಕ ಸಚಿನ್ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಮಂಜು ಸ್ವಾಗತಿಸಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಾಧವ ವಂದಿಸಿದರು.