ಸಿದ್ದಾಪುರ, ಜ. 17: ಜನವಸತಿ ಪ್ರದೇಶದ ಸಮೀಪದ ರಸ್ತೆ ಬದಿಯಲ್ಲಿ ಪಂಚಾಯಿತಿಯು ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವೀರಾಜಪೇಟೆ ರಸ್ತೆಯ ಚೆಸ್ಕಾಂ ಕಚೇರಿಯ ಸಮೀಪದಲ್ಲಿ ಗುಂಡಿಯೊಂದನ್ನು ತೆಗೆದು ಅದರಲ್ಲಿ ಪಟ್ಟಣದ ಕಸ ವಿಲೇವಾರಿ ಮಾಡಲಾಗುತ್ತಿದೆ. ಸಣ್ಣ ಗುಂಡಿಯಿಂದ ಕಸ ಹಾಗೂ ತ್ಯಾಜ್ಯಗಳು ತುಂಬಿ ತುಳುಕುತ್ತಿವೆ. ತ್ಯಾಜ್ಯಗಳು ಕೊಳೆತು ದುರ್ನಾತ ಬಿರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಬೀದಿ ನಾಯಿಗಳು ತ್ಯಾಜ್ಯಗಳನ್ನು ತಿಂದು ರಸ್ತೆಗೆ ಎಳೆದು ತರುತ್ತಿದ್ದು ಬೀದಿ ನಾಯಿಗಳ ಹಾವಳಿಯಿಂದಾಗಿ ಪ್ರಮುಖ ರಸ್ತೆಯಲ್ಲಿ ವಾಹನ ಚಾಲಕರಿಗೆ ಹಾಗೂ ಬೈಕ್ ಸವಾರರಿಗೆ ಸಮಸ್ಯೆ ಎದುರಾಗಿದೆ.

ಈ ಭಾಗದಲ್ಲಿ ಅಂಬೇಡ್ಕರ್ ನಗರವಿದ್ದು ಇಲ್ಲಿ 80ಕ್ಕೂ ಅಧಿಕ ಕಡು ಬಡ ಕುಟುಂಬಗಳು ವಾಸವಾಗಿದ್ದು ಇದೇ ರಸ್ತೆಯ ಮೂಲಕ ಶಾಲೆಗೆ ತೆರಳಲು ಮಕ್ಕಳಿಗೆ ಸಮಸ್ಯೆಯಾಗಿದೆ. ಆದರೆ ಈ ಭಾಗದಿಂದ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಈ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕಾದ ಗ್ರಾಮ ಪಂಚಾಯಿತಿಯು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ರಸ್ತೆ ಬದಿಯಲ್ಲಿ ಗುಂಡಿ ತೋಡಿ ಕಸ ವಿಲೇವಾರಿ ಮಾಡಿರುವದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.