ಸುಂಟಿಕೊಪ್ಪ, ಜ. 17: ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಜಿ.ಪಂ., ತಾ.ಪಂ., ಗ್ರಾ.ಪಂ. ಅನುದಾನ ಕಡಿತ ಗೊಳಿಸಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಸಮಪಾಲು ಸಮ ಬಾಳು’ ಘೋಷಣೆಯಂತೆ ಅಭಿವೃದ್ಧಿಗೆ ಜನರು ಕೈಜೋಡಿಸುತ್ತಿದ್ದು ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸುಂಟಿಕೊಪ್ಪ ಹೋಬಳಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ದುರಾಡಳಿತದಿಂದ ಕರ್ನಾಟಕದ ಜನತೆ ಬೇಸತ್ತಿದ್ದು, ರಾಜ್ಯ ಸಾಲಗಾರ ಸರಕಾರವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಬಿಜೆಪಿ ರಾಷ್ಟ್ರ ಅಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ಬಹಿರಂಗ ಹೇಳಿಕೆ ಸಲ್ಲ: ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಪದಾಧಿಕಾರಿಗಳು ಹಿರಿಯ ಕಾರ್ಯಕರ್ತರು ಪಕ್ಷದ ಆಂತರಿಕ ವಿಷಯ ಮಾಧ್ಯಮಗಳಿಗೆ ಹೇಳಿಕೆ ನೀಡುವದು ಸರಿಯಲ್ಲ ಪಕ್ಷದ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಮಾಡಲಿದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಶ್ರಮಿಸಬೇಕು ಎಂದು ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ವಿ.ಕೆ. ಲೋಕೇಶ್ ಹೇಳಿದರು.

ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿಗೆ ಬಂದಾಗ ಹೇಳಿಕೆ ನೀಡಿದ್ದು, ಅವರಿಗೆ ಕೊಡಗಿನ ಚರಿತ್ರೆ ಗೊತ್ತಿಲ್ಲ ಕೊಡಗಿನವರನ್ನು ಮತಾಂತರಿಸಿ ಹತ್ಯೆ ಮಾಡಿದ ಕ್ರೂರಿ ಟಿಪ್ಪು ಆಗಿದ್ದಾನೆ ಎಂದು ಅವರು ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಹಿಂದುಗಳ ರಕ್ಷಣೆ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಕೊಡಗಿನಲ್ಲಿ ಜಾತಿ ಆಧಾರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಟಿಕೆಟು ನೀಡುವ ಪರಿಪಾಠ ಇದುವರೆಗೆ ಬಂದಿಲ್ಲ ಅದಕ್ಕೆ ಜನರು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮಡಿಕೇರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ಮಾಜಿ ಅಧ್ಯಕ್ಷ ಪಟ್ಟೆಮನೆ ಶೇಷಪ್ಪ, ಪಕ್ಷದ ಹಿರಿಯ ಮುಖಂಡರಾದ ವೈ.ಎಂ. ಕರುಂಬಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಲೀಲಾ ಮೇದಪ್ಪ, ಪಂಚಾಯಿತಿ ಸದಸ್ಯೆ ಪಟ್ಟೆಮನೆ ಗಿರಿಜಾ ಉದಯಕುಮಾರ್, ವಿವಿಧ ಗ್ರಾಮ ಮಟ್ಟದ ಸ್ಥಾನೀಯ ಸಮಿತಿ ಅಧ್ಯಕ್ಷರುಗಳು, ವಿವಿಧ ಬೂತ್ ಘಟಕಗಳ ಅಧ್ಯಕ್ಷರುಗಳು ಕಾರ್ಯಕರ್ತರು ಇದ್ದರು. ನಗರ ಬಿಜೆಪಿ ಮಾಜಿ ಬಿ.ಕೆ. ಮೋಹನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.