ಭಾಗಮಂಡಲ, ಜ.17: ನಿನ್ನೆ ಮಧ್ಯರಾತ್ರಿ ವೇಳೆ ಇಲ್ಲಿಗೆ ಸನಿಹ ಸಿಂಗತ್ತೂರುವಿನ ಬಳಿಯ ಚಂಗೇಟಿ ಗ್ರಾಮದಲ್ಲಿ ಒಮಿನಿ ವ್ಯಾನ್ ಒಂದು ಸಂಶಯಾಸ್ಪದವಾಗಿ ಸಂಚರಿಸುತ್ತಿತ್ತು. ಗ್ರಾಮದ ಪ್ರಮುಖ ಡಾಲಿ ಎನ್ನುವವರು ಇದನ್ನು ಗಮನಿಸಿ ಊರಿನ ತಮ್ಮ ಪ್ರಮುಖರಿಗೆ ದೂರವಾಣಿ ಮೂಲಕ ಮಾಹಿತಿಯಿತ್ತರು. ಶರ ವೇಗದಲ್ಲಿ ಊರಿನ ಮಂದಿ ಒಮಿನಿ ಸಂಚರಿಸುತ್ತಿದ್ದ ಸ್ಥಳಕ್ಕೆ ಬೈಕ್ ಮತ್ತಿತರ ವಾಹನಗಳಲ್ಲಿ ಧಾವಿಸಿದರು. ವ್ಯಾನ್‍ನಲ್ಲಿದ್ದವರು ಗಾಬರಿಯಾಗುತ್ತಿದ್ದಂತೆ ಊರಿನ ಪ್ರಮುಖರು ವಿಚಾರಣೆ ನಡೆಸಿದರು. ವ್ಯಾನ್‍ನ ಒಳಗಿದ್ದ ಇಬ್ಬರು ತಾವು ಮರಳು ತರಲೆಂದು ಬಂದಿರುವದಾಗಿ ಸಬೂಬು ಹೇಳಿದರು. ಸಂಶಯಗೊಂಡ ಗ್ರಾಮಸ್ಥರು ವ್ಯಾನ್‍ನ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ವ್ಯಾನ್‍ನ ಸೀಟ್‍ಗಳನ್ನೆಲ್ಲ ತೆಗೆದಿದ್ದು ಖಾಲಿ ಸ್ಥಳದಲ್ಲಿ ಎರಡು ಎತ್ತುಗಳನ್ನು ನಿಲ್ಲಿಸಲಾಗಿತ್ತು

ಗ್ರಾಮಸ್ಥರ ಮುಂದೆ ತಪ್ಪೊಪ್ಪಿ ಕೊಂಡ ಕೊಟ್ಟಮುಡಿಯ ಉಮ್ಮರ್ ಮತ್ತು ಚೆರಿಯಪರಂಬುವಿನ ಹಸೈನಾರ್

(ಮೊದಲ ಪುಟದಿಂದ) ಎಂಬವರುಗಳು ತಾವು ಸ್ಥಳೀಯ ಗ್ರಾಮದಲ್ಲಿ ಎರಡು ಎತ್ತುಗಳನ್ನು ಒಟ್ಟು ರೂ. 16 ಸಾವಿರಕ್ಕೆ ಖರೀದಿಸಿದ್ದುದಾಗಿ ತಿಳಿಸಿದರು. ಈ ಎತ್ತುಗಳನ್ನು ಅಕ್ರಮವಾಗಿ ಕೊಟ್ಟಮುಡಿಗೆ ಮಾರಾಟಕ್ಕೆ ಒಯ್ಯಲಾಗುತ್ತಿತ್ತು. ಈ ಒಮಿನಿ ವ್ಯಾನ್ ಅಯ್ಯಂಗೇರಿಯ ವ್ಯಕ್ತಿಗೆ ಸೇರಿದ್ದು ಇತ್ತೀಚೆಗಷ್ಟೆ ಆರೋಪಿಗಳು ಖರೀದಿಸಿದ್ದುದಾಗಿ ಹೇಳಲಾಗಿದೆ.

ಒಮಿನಿ ವ್ಯಾನ್‍ನ ಸೀಟುಗಳನ್ನು ಖಾಯಂ ಆಗಿ ತೆಗೆದಿರಿಸಲಾಗಿದ್ದು ಈ ಸ್ಥಳದಲ್ಲಿ ನಿರಂತರವಾಗಿ ಆರೋಪಿಗಳು ಗೋ ಸಾಗಾಟ ನಡೆಸುತ್ತಿರುವದಾಗಿ ತಿಳಿದುಬಂದಿದೆ. ಭಾಗಮಂಡಲ ಪೊಲೀಸರು ವಾಹನ ಸಹಿತ ಗೋವುಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.