ಮಡಿಕೇರಿ, ಜ. 17 : ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಘಟಕ ಮತ್ತು ಕ್ರೀಡಾ ಸಮಿತಿ ವತಿಯಿಂದ ವೀರಶೈವ ಲಿಂಗಾಯಿತ ಸಮಾಜ ಬಾಂಧವರಿಗಾಗಿ ತಾ. 21 ರಂದು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಮತ್ತು ಕ್ರೀಡಾಕೂಟ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತಾ. 23 ರಂದು ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಮಾಹಿತಿ ನೀಡಿದರು. 2ನೇ ವರ್ಷದ ಕ್ರೀಡಾಕೂಟವನ್ನು ತಾ. 21 ರಂದು ಬೆಳಿಗ್ಗೆ 9.30 ಕ್ಕೆ ಶನಿವಾರಸಂತೆಯ ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜಮ್ಮ ಉದ್ಘಾಟಿಸಲಿದ್ದಾರೆ ಎಂದರು.

‘ಅರಿವು ಮತ್ತು ಸಂಘಟನೆ’ ಘೋಷ ವಾಕ್ಯದೊಂದಿಗೆ ಅಂದು ಬೆಳಿಗ್ಗೆ 8 ಗಂಟೆಗೆ ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಗುಡುಗಳಲೆ ಜಾತ್ರಾ ಮೈದಾನದವರೆಗೆ ಸಮಾಜ ಬಾಂಧವರಿಂದ ಬೈಕ್ ಜಾಥಾ ನಡೆಯಲಿದ್ದು, ಜಾತ್ರಾ ಮೈದಾನದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿದೆ ಎಂದರು.

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, 2016-17 ರಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾನಗಲ್ ಕುಮಾರಸ್ವಾಮಿ ಅವರ 150ನೇ ಜಯಂತ್ಯುತ್ಸವ ಮತ್ತು ವೀರಶೈವ ಲಿಂಗಾಯಿತ ಧಾರ್ಮಿಕ

(ಮೊದಲ ಪುಟದಿಂದ) ಸಮಾವೇಶ ತಾ. 23 ರಂದು ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಶ್ರೀವಿಶ್ವೇಶ್ವರ ಸ್ವಾಮೀಜಿ, ಶನಿವಾರಸಂತೆಯ ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೋಡು ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ತೊರೆನೂರು ಮಠದ ಶ್ರೀಮಲ್ಲೇಶ ಸ್ವಾಮೀಜಿ, ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದು, ಅ.ಭಾ.ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗೀಶ್ ಪ್ರಸಾದ್ ಉದ್ಘಾಟಿಸಲಿದ್ದಾರೆ ಎಂದರು. ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರÀ ಸಮಿತಿಯ ಮಹಿಳಾ ಅಧ್ಯಕ್ಷೆ ಗೀತಾ ಜಯಂತ್ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಕಟ ಪೂರ್ವ ಸರಕಾರಿ ಅಭಿಯೋಜಕÀ ಹೆಚ್.ಎಸ್. ಚಂದ್ರಮೌಳಿ ಹಾಗೂ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತÀ ಜೆ.ಎಸ್.ವಿರೂಪಾಕ್ಷಯ್ಯ ಉಪಸ್ಥಿತರಿರುವರು.

ವೀರಶೈವ ಲಿಂಗಾಯಿತ ಸಮುದಾಯದ ಗಣ್ಯರನ್ನು ಅಲ್ಲದೆ, 95 ವರ್ಷ ಮೇಲ್ಪಟ್ಟ ಹಿರಿಯರನ್ನು ಗೌರವಿಸಲಾಗುವದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು, ಉಪಾಧ್ಯಕ್ಷ ಕೆ.ಬಿ.ಹಾಲಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ವಿ.ವಿಶ್ವನಾಥ್ ಹಾಗೂ ಕಾರ್ಯದರ್ಶಿ ಡಿ.ಬಿ.ಸೋಮಪ್ಪ ಉಪಸ್ಥಿತರಿದ್ದರು.