ಮಡಿಕೇರಿ, ಜ.17: ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ಇದೇ 28 ರಂದು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತದೊಂದಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆ ಬಳಿ ಮಾಜಿ ಸೈನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಪುಷ್ಪಾರ್ಷನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದು, ನಂತರ ಸೇನಾ ಬ್ಯಾಂಡ್ ಹಾಗೂ ಪೊಲೀಸ್ ಬ್ಯಾಂಡ್‍ನೊಂದಿಗೆ ಕೋಟೆವರೆಗೆ ಮೆರವಣಿಗೆ ಮತ್ತಿತರ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸಹಕರಿಸುವಂತೆ ಫೋರಂ ಅಧ್ಯಕ್ಷರು ಹಾಗೂ ಇತರರಲ್ಲಿ ಜಿಲ್ಲಾಧಿಕಾರಿ ಕೋರಿದರು.

ರಾಷ್ಟ್ರಗೀತೆ ಸ್ಪರ್ಧೆಯನ್ನು ಕಾರ್ಯಕ್ರಮದ ಹಿಂದಿನ ದಿನವೇ ತಾ. 27 ರಂದು ಆಯೋಜಿಸುವಂತಾಗಬೇಕು. ಬಹುಮಾನ ವಿಜೇತರ ಎಲ್ಲಾ ತಂಡಗಳು ಕಾರ್ಯಕ್ರಮದಂದು ಪಾಲ್ಗೊಳ್ಳಬೇಕು.

(ಮೊದಲ ಪುಟದಿಂದ) ಆ ನಿಟ್ಟಿನಲ್ಲಿ ಸಮನ್ವಯ ಸಾಧಿಸುವಂತೆ ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಸುಬ್ಬಯ್ಯ (ನಿವೃತ್ತ) ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ ಕಾರ್ಯಪ್ಪ ಅವರನ್ನು ಆಹ್ವಾನಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಫೋರಂನ ಸಂಚಾಲಕ ಮೇಜರ್ ನಂಜಪ್ಪ (ನಿವೃತ್ತ) ಮಾತನಾಡಿ, ಸೈನಿಕ ಶಾಲೆಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಹಾಗೂ ಫೀಲ್ಡ್ ಮಾರ್ಷಲ್ ಕುರಿತು ವಿದ್ಯಾರ್ಥಿಗಳು ಅಭಿನಯ (ಸ್ಕಿಟ್) ಪ್ರದರ್ಶನ ಮಾಡಲು ಅವಕಾಶ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು.

ಮಾಜಿ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವಂತೆ ಸೈನಿಕ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಸಲಹೆ ಮಾಡಿದರು.

ಫೀಲ್ಡ್ ಮಾರ್ಷಲ್ ಜೀವನ ಚರಿತ್ರೆ ಕುರಿತು ಕಿರುಪುಸ್ತಕ ಮುದ್ರಣ ಮಾಡಿಸುವದು, ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್ ಕಲಾ ಪ್ರದರ್ಶನ ಮಾಡಲು ವ್ಯವಸ್ಥೆ ಮಾಡುವದು, ಇತರೆ ಬಗ್ಗೆ ಚರ್ಚೆ ನಡೆಯಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಜಯರಾಮ, ಮಾದೇಟಿರ ಬೆಳ್ಯಪ್ಪ, ನಂದೇಟಿರ ರಾಜ ಮಾದಪ್ಪ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಮೊದಲಾದವರು ಹಾಜರಿದ್ದರು.