ಮಡಿಕೇರಿ, ಜ. 17: ಆಸ್ತಿ ವೈಷಮ್ಯದಿಂದ ತನ್ನ ತಮ್ಮನನ್ನು ಕೋವಿಯಿಂದ ಗುಂಡು ಹಾರಿಸಿ ಕೊಲೆಗೈದಿದ್ದಲ್ಲದೆ ಮೃತರ ಹೆಂಡತಿಯ ಕೊಲೆಗೂ ಯತ್ನಿಸಿದ್ದ ಆರೋಪಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ: ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಾದಾಪುರ ಉಪ ಠಾಣಾ ವ್ಯಾಪ್ತಿಯ ಗರ್ವಾಲೆ ಗ್ರಾಮದ ಕಲ್ಲಡಿ ಎಂಬಲ್ಲಿ ಆರೋಪಿ ತಾಚಮಂಡ ಟಿ. ಕಾರ್ಯಪ್ಪ ಮತ್ತು ಆತನ ತಮ್ಮ ಮೃತ ನಂಜುಂಡ ಅವರಿಗೆ ಆಸ್ತಿಯ ವಿಚಾರದಲ್ಲಿ ಆಗಾಗ ಗಲಾಟೆ ಆಗುತ್ತಿದ್ದು, ಅದೇ ಗ್ರಾಮದ ಈರಪ್ಪ ಮತ್ತು ಚಂಗಪ್ಪ ರಾಜಿ ತೀರ್ಮಾನ ಮಾಡಿದ್ದರು. ಆರೋಪಿ ಇದಕ್ಕೆ ಒಪ್ಪದೆ ನಂಜುಂಡ ಮತ್ತು ಆತನ ಹೆಂಡತಿ ಭಾಗ್ಯವತಿ ಮೇಲೆ ದ್ವೇಷ ಸಾಧಿಸಿ ತಾ. 10.3.2015 ರಂದು ಸಮಯ 9.30 ಗಂಟೆಗೆ ನಂಜುಂಡ ಮತ್ತು ಆತನ ಪತ್ನಿ ಭಾಗ್ಯವತಿ ಕಾಫಿ ತೋಟಕ್ಕೆ ನಡೆದುಕೊಂಡು ಹೋಗುತ್ತಿ ದ್ದಾಗ ಆರೋಪಿತನು ಎದುರಿನಿಂದ ಏಕಾಏಕಿ ಒಂಟಿ ನಳಿಕೆ ಕೋವಿಯಿಂದ ಗುಂಡು ಹೊಡೆದು ನಂಜುಂಡರ ವರನ್ನು ಕೊಲೆ ಮಾಡಿದ್ದಾನೆ.
ಬಂದೂಕಿನಿಂದ ಸಿಡಿದ ಚಿಲ್ಲು ಈ ವೇಳೆ ಭಾಗ್ಯವತಿ ಅವರ ಬಲ ಹೊಟ್ಟೆಯ ಭಾಗಕ್ಕೆ ತಾಗಿ ಗಾಯವಾಗಿದೆ. ಗಾಯಾಳು ಭಾಗ್ಯವತಿ ಬೊಬ್ಬೆ ಹಾಕುತ್ತಿದ್ದಾಗ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಕೋವಿಗೆ ತೋಟವನ್ನು ಲೋಡು ಮಾಡುತ್ತಿದ್ದುದ್ದನ್ನು ಕಂಡ ಭಾಗ್ಯವತಿ ಹೆದರಿ ಬೊಬ್ಬೆ ಹಾಕಿಕೊಂಡು ರಸ್ತೆಯ ಕಡೆ ಓಡಿ ಹೋದಾಗ ಆರೋಪಿ ಅಟ್ಟಿಸಿಕೊಂಡು ಹೋಗಿ ಭಾಗ್ಯವತಿ ಸಿಗದಿದ್ದಾಗ ಪುನಃ ನಂಜುಂಡನಿಗೆ ಕೋವಿಯಿಂದ ಎದೆಯ ಭಾಗಕ್ಕೆ ಹತ್ತಿರದಿಂದ ಮತ್ತೊಂದು ಗುಂಡು ಹೊಡೆದಿರುತ್ತಾನೆ.
ಆರೋಪಿ ವಿರುದ್ಧ ಕೊಲೆ ಅಪರಾಧ ಮತ್ತು ಕೊಲೆಯತ್ನದ ಅಪರಾಧ ಹಾಗೂ ಬಂದೂಕು ಪರವಾನಿಗೆ ದುರುಪಯೋಗದ ಅಡಿಯಲ್ಲಿ ಸೋಮವಾರಪೇಟೆ ಠಾಣಾ ಪೊಲೀಸರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಆಲಿಸಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ತೀರ್ಪಿನಂತೆ ಆರೋಪಿತನು ಎಸಗಿರುವ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ರೂ. 25 ಸಾವಿರ ದಂಡ, ಕೊಲೆ ಮಾಡಲು ಯತ್ನಿಸಿರುವ ಅಪರಾಧ ಕ್ಕಾಗಿ 10 ವರ್ಷಗಳ ಕಾರಾಗೃಹವಾಸ ಮತ್ತು ರೂ. 10 ಸಾವಿರ ದಂಡ ಹಾಗೂ ಬಂದೂಕು ಪರವಾನಿಗೆ ದುರುಪಯೋಗದ ಅಪರಾಧಕ್ಕಾಗಿ 3 ವರ್ಷ ಕಾರಾಗೃಹ ವಾಸ ಮತ್ತು ರೂ. 3 ಸಾವಿರ ದಂಡ ಪಾವತಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಪಾವತಿಯಾಗುವ ದಂಡದಲ್ಲಿ ರೂ. 35 ಸಾವಿರವನ್ನು ಮೃತನ ಪತ್ನಿ ಭಾಗ್ಯವತಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್ ಖಾನ್ ವಾದ ಮಂಡಿಸಿದರು.