ವೀರಾಜಪೇಟೆ, ಜ. 17: ವೀರಾಜಪೇಟೆ ತಾಲೂಕಿನ ಕೃಷಿ ಇಲಾಖೆಯ ಜಲಾನಯನ ಯೋಜನೆಯಡಿಯಲ್ಲಿ ಕೋಟ್ಯಂತರ ಹಣ ದುರುಪಯೋಗಗೊಂಡಿರು ವದನ್ನು ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಹಾಗೂ ಉಪಾಧ್ಯಕ್ಷ ಸುನು ಸುಬ್ಬಯ್ಯ ಅವರು ಲೋಕಾಯುಕ್ತ ಮಡಿಕೇರಿ ವಿಭಾಗದ ಪ್ರಬಾರ ಡಿವೈಎಸ್‍ಪಿ ಮೋಹಿತ್ ಸಹದೇವ್ ಅವರಿಗೆ ದಾಖಲೆ ಸಮೇತ ದೂರನ್ನು ನೀಡಿದರು.

ವೀರಾಜಪೇಟೆಗೆ ಇಂದು ಆಗಮಿಸಿದ ಮೋಹಿತ್ ಸಹದೇವ್ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಅನಿಲ್ ಅವರ ತಂಡ ವೀರಾಜಪೇಟೆ ತಾಲೂಕಿನ ಕೃಷಿ ನಿರ್ದೇಶನ ಕಚೇರಿಗೆ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯಡಿಯಲ್ಲಿ ಬಂದ ಹಣದಲ್ಲಿ ಬೇನಾಮಿ ಹೆಸರಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಹಣ ದುರುಪ ಯೋಗಗೊಳಿಸಲಾಗಿದೆ. ತೊಟ್ಟಿಲು ಗುಂಡಿ, ಚೆಕ್ ಡ್ಯಾಂ ನರ್ಸರಿ ಗಿಡಗಳ ಹೆಸರಿನಲ್ಲಿಯೂ ಬೇನಾಮಿಯಾಗಿ ಸುಮಾರು 30ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಅನಿಲ್ ಅಯ್ಯಪ್ಪ ಲೋಕಾಯುಕ್ತಕ್ಕೆ ದಾಖಲೆ ತೋರಿಸಿ ದೂರಿದರು.

ಕೃಷಿ ಇಲಾಖೆಯಿಂದ ಪಡೆದ ಮಾಹಿತಿ ಹಕ್ಕಿನ ದಾಖಲೆ ಪ್ರಕಾರ ಕೃಷಿ ಹೊಂಡವನ್ನು ಮಹೇಶ್, ತಿಲಕ್, ಸೌಮ್ಯ ಎಂಬುವರು ಹೆಸರನ್ನು ಬೇನಾಮಿಯಾಗಿ ಬಳಸಿ ಅನೇಕ ಬಾರಿ ದುರುಪಯೋಗಪಡಿಸಿಕೊಳ್ಳಲಾಗಿದ್ದು ಇವರ ಹೆಸರಿನಲ್ಲಿ ಕೃಷಿ ಹೊಂಡದ ಬಿಲ್ ಪಾವತಿಸಲಾಗಿದೆ. ಇದರಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎ.ಜೆ.ರೀನಾ ಹಾಗೂ ಕೃಷಿ ಅಧಿಕಾರಿ ಶಿವಯ್ಯ ಗೌಡ ಶಾಮಿಲಾಗಿದ್ದಾರೆ. ರೈತರು ಈ ಸೌಲಭ್ಯವನ್ನು ಅಧಿಕಾರಿಗ ಳೊಂದಿಗೆ ಮಾಹಿತಿ ಬಯಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಸಂಘಟನೆಗೆ ಪುಕಾರು ನೀಡಿರುವದಾಗಿ ಅನಿಲ್ ಲೋಕಾಯುಕ್ತಕ್ಕೆ ದೂರಿದರು.

ಸಮಗ್ರ ಜಲಾನಯನ ಯೋಜನೆ ಯಡಿ ಬ್ಯಾಚ್ ನಂ.3 ವ್ಯಾಪ್ತಿಯ ಕಾಕೋಟುಪರಂಬು, ಕದನೂರು, ಹಾಲುಗುಂದ ಹಾಗೂ ಕೆದಮುಳ್ಳೂರು ರೈತ ಫಲಾನುಭವಿಗಳ ಅಗತ್ಯ ಸೌಲಭ್ಯವು ದುರುಪಯೋಗ ಗೊಂಡಿದೆ ಎಂದು ದೂರಿದ ಸಂಘಟನೆಯ ಉಪಾಧ್ಯಕ್ಷ ಸುನು ಸುಬ್ಬಯ್ಯ ಅವರು ಮಡಿಕೇರಿ ತಾಲೂಕಿನಲ್ಲೂ ಇದೇ ರೀತಿ ಸೌಲಭ್ಯ ದುರುಪಯೋಗ ಗೊಂಡಿರುವ ಶಂಕೆ ಇದ್ದು ಇನ್ನು ದಾಖಲೆ ದೊರೆತಿಲ್ಲ ಎಂದು ಲೋಕಾ ಯುಕ್ತ ಮೋಹಿತ್‍ಗೆ ತಿಳಿಸಿದರು. ಲೋಕಾಯುಕ್ತ ಡಿವೈಎಸ್‍ಪಿ ಮೋಹಿತ್ ಅವರೊಂದಿಗೆ ಲೋಕೇಶ್ ಹಾಗೂ ಕರ್ತವಯ್ಯ ಸಿಬ್ಬಂದಿಗಳು ಹಾಜರಿದ್ದರು.

ಲೋಕಾಯುಕ್ತ ಭರವಸೆ: ಸಂಘಟನೆಯ ದೂರಿನ ಮನವಿ ಸ್ವೀಕರಿಸಿದ ಮೋಹಿತ್ ಅವರು ದೂರಿನ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗು ವದು ಎಂದು ಸಂಘಟನೆಗೆ ಭರವಸೆ ನೀಡಿದರು.