ಮಡಿಕೇರಿ, ಜ. 17: ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಬೇಧಿಸಿರುವ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಕ್ಕೋಡ್ಲು ಗ್ರಾಮದ ಪದ್ಮನಾಭ ಅವರ ತೋಟದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಬೀಟಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆದಿನ ಆರೋಪಿಗಳಾದ ಸುಂಟಿಕೊಪ್ಪದ ಲತೀಫ್, ಬೋಯಿಕೇರಿಯ ಸುಜಿತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 3 ಲಕ್ಷ ರೂ. ಮೌಲ್ಯದ ಬೀಟಿ ಮರ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ತಾ. 16 ರಂದು ಕಡಗದಾಳು ಗ್ರಾಮದ ಮುತ್ತಮ್ಮ ಎಂಬವರ ಮನೆಗೆ ತೆರಳಿದ್ದ ದುಷ್ಕರ್ಮಿಗಳು ಮುತ್ತಮ್ಮ ಅವರ ಬಾಯಿಗೆ ಬಟ್ಟೆ ಕಟ್ಟಿ, ಪ್ರಜ್ಞೆ ತಪ್ಪುವಂತೆ ಮಾಡಿ ಮನೆಯ ಮಂಚದ ಅಡಿಯಲ್ಲಿದ್ದ 1 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಿವಾಸಿಗಳಾದ ಕೃಷ್ಣ ಹಾಗೂ ಯತೀಶ್ ಎಂಬವರುಗಳನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಎರಡು ಪ್ರತ್ಯೇಕ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ. ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಅರ್. ಪ್ರದೀಪ್, ಉಪ ನಿರೀಕ್ಷಕ ವಿ. ಚೇತನ್, ಪ್ರೊಬೇಷನರಿ ಪಿಎಸ್‍ಐ ಶ್ರೀನಿವಾಸ್ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ ಎಎಸ್‍ಐ ಅಲೆಗ್ಸಾಂಡರ್, ಹೆಡ್‍ಕಾನ್ಸ್‍ಟೇಬಲ್ ಇಬ್ರಾಹಿಂ, ವಿಜಯ್‍ಕುಮಾರ್, ಕಾನ್ಸ್‍ಟೇಬಲ್‍ಗಳಾದ ಶಿವರಾಜ್ ಹಾಗೂ ಸತೀಶ್, ದಿನೇಶ್, ಪ್ರೇಮ್‍ಕುಮಾರ್ ಹಾಗೂ ಚಾಲಕರಾದ ಸುನಿಲ್, ಅರುಣ್ ಕುಮಾರ್ ಪಾಲ್ಗೊಂಡಿದ್ದರು.