ಮಡಿಕೇರಿ, ಜ. 16: ವೀರಾಜಪೇಟೆಯ ಶ್ರೀಆದಿ ದಂಡಿನಮಾರಿಯಮ್ಮ ಹಾಗೂ ಸಹಪರಿವಾರ ದೇವರ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂಜಾ ಕೈಂಕರ್ಯಗಳು ತಾ. 19 ರಿಂದ ತಾ. 22ರ ವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಹೆಚ್.ಎಮ್. ತಮ್ಮಯ್ಯ, ನಾಲ್ಕು ದಿನಗಳ ಕಾಲ ವೀರಾಜಪೇಟೆಯ ಕುಕ್ಲೂರು ಶ್ರೀಮೂಲ ಭದ್ರಕಾಳಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಭಟ್ ಹಾಗೂ ವೇದಮೂರ್ತಿ ತಂತ್ರಿಗಳಾದ ಶ್ರೀರಾಘವೇಂದ್ರ ಪ್ರಸಾದ ಶಾಸ್ತ್ರಿ ಇವರುಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ ಎಂದರು. ತಾ. 19 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪೂಣ್ಯಾಹವಾಚನ, ವೇದ ಪರಾಯಣಾ, ಗಣಪತಿ ಹೋಮ, ಕೂಪಶಾಂತಿ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ದುರ್ಗಾ ನಮಸ್ಕಾರ ಪೂಜೆ ಮತ್ತು ಮಹಾಪೂಜೆ ನಡೆಯಲಿದೆ.
ತಾ. 20 ರಂದು ಬೆಳಿಗ್ಗೆ ಗಣಹೋಮ, ಕಲಶಪ್ರತಿಷ್ಠೆ, ಪ್ರಾಯಶ್ಚಿತ ಹೋಮ, ನಾಗ ಪ್ರತಿಷ್ಠೆ ಆಶ್ಲೇಶಾಬಲಿ, ಮಹಾಪೂಜೆ ಹಾಗೂ ಸಂಜೆ ದುರ್ಗಾ ಪೂಜೆ ಸ್ಥಳ ಶುದ್ಧಿ, ಬಿಂಬ ಶುದ್ಧಿ, ಪ್ರಾಸಾದ ಶುದ್ಧಿ ನಡೆಯಲಿದೆ. ತಾ. 21 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಕಲಸ ಪ್ರತಿಷ್ಠೆ, ದೇವರ ಮೂರ್ತಿಗಳ ಮೆರವಣಿಗೆ ಚಾಮುಂಡಿ ಗುಳಿಗಾ ಪ್ರತಿಷ್ಠೆ, ಮಹಾಪೂಜೆ ಸಂಜೆ ದುರ್ಗಾ ಪೂಜೆ, ಮಂಟಪ ಸಂಸ್ಕಾರ, ಆದಿವಾಸ ಹೋಮ, ಕಲಶಾಧಿ ವಾಸ ಕಲಶ ಪೂಜೆ, ಮಾರಿಯಮ್ಮ ದೇವರ ಬಿಂಬ ಶುದ್ಧಿ, ಮಹಾ ಪೂಜೆ ನಡೆಯಲಿದೆ. ಜ.22 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕುಂಬಾಭಿಷೇಕ, ಮಾರಿಯಮ್ಮ ಸಹಾ ಪರಿವಾರ ದೇವರ ಪ್ರತಿಷ್ಟಾ ಬ್ರಹ್ಮಕಲಶಾಭಿಷೇಕ ತಂಬಿಲ ಮಹಾಪೂಜೆ, ಮಂತ್ರಾಕ್ಷತೆ ಜರುಗಲಿದೆ.
ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಾಲ್ಕುದಿನವೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ ಎಂದು ತಮ್ಮಯ್ಯ ತಿಳಿಸಿದರು.
ಶ್ರೀಆದಿ ದಂಡಿನ ಮಾರಿಯಮ್ಮ ದೇವಾಲಯವು 300 ವರ್ಷಗಳ ಇತಿಹಾಸವನ್ನು ಹೊಂದಿದ್ದು, ದಲಿತ ಕುಟುಂಬಗಳು ನಡೆಸುತ್ತಿರುವ ದೇವಾಲಯವಾಗಿದೆ. ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದ್ದು, ಸುಮಾರು 30 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಶ್ರೀಆದಿಶಕ್ತಿ ದಂಡಿನ ಮಾರಿಯಮ್ಮ ಸೇರಿದಂತೆ ಸಹಪರಿವಾರದ ದುರ್ಗಿ, ಚಾಮುಂಡಿ, ವಿಷ್ಣು ಮೂರ್ತಿಗಳ ಪುನರ್‍ಪ್ರತಿಷ್ಠಾಪನೆ ಕೂಡ ನಡೆಯಲಿದೆ. ತಮಿಳುನಾಡಿನ ಶಿಲ್ಪಿಗಳಾದ ರವಿದೊರೈ ಹಾಗೂ ತಂಡ ದೇವಲಾಯಗಳ ಮೂರ್ತಿ ಕೆತ್ತನೆ ಕಾರ್ಯ ನಿರ್ವಹಿಸಿದ್ದಾರೆ ಎಂದು ತಮ್ಮಯ್ಯ ಮಾಹಿತಿ ನೀಡಿದರು.
ದೇವಾಲಯಕ್ಕೆ ಧನ ಸಹಾಯ ಮಾಡುವವರು ಈ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಬಹುದೆಂದು ಅವರು ತಿಳಿಸಿದರು.
ಮಾರಿಯಮ್ಮ ದೇವಾಸ್ಥಾನ, ಶಿವಕೇರಿ, ವಿರಾಜಪೇಟೆ, ಕಾರ್ಪೋರೇಷನ್ ಬ್ಯಾಂಕ್, ವೀರಾಜಪೇಟೆ ಶಾಖೆ, ಖಾತೆ ಸಂಖ್ಯೆ 520101215705838 (ಎಸ್‍ಬಿ) ಹೆಚ್ಚಿನ ಮಾಹಿತಿಗಾಗಿ 9901826144ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀಆದಿ ದಂಡಿನ ಮಾರಿಯಮ್ಮ ದೇವಾಲಯದ ಸದಸ್ಯರುಗಳಾದ ಹೆಚ್.ಡಿ.ವೆಂಕಟ್ರಮಣ, ಹೆಚ್.ಎಸ್.ಶಂಕರ್, ಹೆಚ್.ಜಿ. ಪಾಪಯ್ಯ ಹಾಗೂ ಹೆಚ್.ವಿ. ನಂದಕುಮಾರ್ ಉಪಸ್ಥಿತರಿದ್ದರು.