*ಗೋಣಿಕೊಪ್ಪಲು, ಜ. 16: ಜಿಲ್ಲೆಗೆ ಹೊರರಾಜ್ಯದಿಂದ ಬಂದ ವ್ಯಾಪಾರಿಗಳೊಡನೆ ಕನ್ನಡ ಅಥವಾ ಕೊಡವ ಭಾಷೆಯಲ್ಲಿ ಮಾತನಾಡುವ ಮೂಲಕ ಕನ್ನಡ ಮತ್ತು ಕೊಡವ ಭಾಷೆ, ಸಂಸ್ಕøತಿ ಬೆಳವಣಿಗೆಗೆ ಮುಂದಾಗಬೇಕು ಎಂದು ಕೊಡಗು ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಕಿವಿಮಾತು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹುದಿಕೇರಿ ಜನತಾ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ನಡೆದ ಮೊಣ್ಣಂಡ ಕೆ. ಚಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡವ-ಕನ್ನಡ ಭಾಷಾ ಬಾಂಧವ್ಯ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಹೊರರಾಜ್ಯದ ಭಾಷಿಕರೊಡನೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಅವರ ಭಾಷೆಯನ್ನು ನಾವು ಕಲಿತುಕೊಳ್ಳುತ್ತಿದ್ದೇವೆ. ಆದರೆ ಕನ್ನಡ, ಕೊಡವ ಭಾಷೆಯನ್ನು ಕಲಿಸಲು ನಾವು ಮುಂದಾಗುತ್ತಿಲ್ಲ. ಇತರರಿಗೆ ನಮ್ಮ ಭಾಷೆಗಳನ್ನು ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕಾರಣರಾಗಬೇಕು ಎಂದು ಹೇಳಿದರು.
ಭಾಷೆಗಳನ್ನು ಕಲಿತರೆ ಭಾಂಧವ್ಯ ವೃದ್ದಿಸುತ್ತದೆ. ಈ ನೆಲದ ಭಾಷೆಯನ್ನು ಪ್ರೀತಿಸುವ ಮೂಲಕ ಪ್ರತಿಯೊಬ್ಬರೂ ಇಲ್ಲಿನ ಮೂಲ ಭಾಷೆಯಾದ ಕೊಡವ ಭಾಷೆಯನ್ನು ಬೆಳೆಸಿ ಉಳಿಸಬೇಕಾಗಿದೆ. ಭಾಷೆಯ ಬೆಳವಣಿಗೆಗೆ ಜಾತಿ, ಧರ್ಮ ಬೇಡ. ಉತ್ತಮ ಮನೋಭಾವನೆ ಬೆಳೆಸಿಕೊಂಡು ಕೊಡಗಿನ ಮಣ್ಣಿನ ಭಾಷೆಯೆಂದು ಹೇಳುವ ಕೊಡವ ಭಾಷೆಯನ್ನು ಬೆಳೆಸಬೇಕಾಗಿದೆ ಎಂದರು.
ತಾಲೂಕು ಕ.ಸಾ.ಪ ಅಧ್ಯಕ್ಷ ಮುಲ್ಲೇಂಗಡ ಮದೋಷ್ ಪೂವಯ್ಯ ಮಾತನಾಡಿ, ಕನ್ನಡದ ಉಪ ಭಾಷೆಯಾದ ಕೊಡವ ಭಾಷೆಯನ್ನು ಉಳಿಸಿಕೊಳ್ಳುವದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಭಾಷಾ ತಜ್ಞರ ಅಭಿಪ್ರಾಯದ ಮತ್ತು ಸಮೀಕ್ಷೆಯ ಪ್ರಕಾರ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ಕೊಡವ ಭಾಷೆಯೂ ಒಂದು ಎಂಬ ವರದಿ ನೀಡಿದ್ದಾರೆ. ಇದು ಈ ನೆಲದ ಭಾಷೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ ಎಂಬದು ದುಃಖದ ವಿಚಾರವಾಗಿದೆ. ಕೊಡವ ಭಾಷೆ ಅಳಿದರೆ ಕನ್ನಡ ಭಾಷೆಯ ನಾಶಕ್ಕೆ ಹಾದಿಯಾಗುತ್ತದೆ ಎಂಬದೂ ಸತ್ಯ. ಹೀಗಾಗಿ ಕೊಡವ ಭಾಷೆಯನ್ನು ಉಳಿಸಿ ಬೆಳೆಸುವದರಿಂದ ಕನ್ನಡ ಭಾಷೆಯ ಬೆಳವಣಿಗೆಯೂ ಸಾಧ್ಯ ಎಂದು ಹೇಳಿದರು.
ಜನತಾ ಪ್ರೌಢಶಾಲೆಯ ಅಧ್ಯಕ್ಷ ಚಂಗುಲಂಡ ಸೂರಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಮ್ಮ ಸಂಸ್ಕøತಿ, ಪರಂಪರೆ ಉಳಿಯಲು ಭಾಷೆಯ ಬೆಳವಣಿಗೆಯಾಗಬೇಕು. ಕನ್ನಡ ಮತ್ತು ಕೊಡವ ಭಾಷೆಯ ಜತೆಗೆ ಇಂಗ್ಲೀಷ್ ಪದಗಳನ್ನು ಬೆರೆಸದೆ ಶುದ್ದ ಭಾಷೆ ಮಾತನಾಡಬೇಕು ಎಂದು ಹೇಳಿದರು.
ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕೆ. ಮೋಹನ್ ಕುಮಾರಿ ಮಾತನಾಡಿ, ಒಂದು ಭಾಷೆ ಉಳಿಯಬೇಕಾದರೆ ಅದರ ಸಾಹಿತ್ಯ ಅಧ್ಯಯನ ಮಾಡಬೇಕು. ಯುವಪೀಳಿಗೆ ಹೆಚ್ಚು ಓದುವದರ ಮೂಲಕ ಕನ್ನಡ ಮತ್ತು ಕೊಡವ ಭಾಷೆಯನ್ನು ಉಳಿಸಿಕೊಳ್ಳ ಬಹುದು ಎಂದು ತಿಳಿಸಿದರು.
ಶ್ರೀಮಂಗಲ ಹೋಬಳಿ ಕ.ಸಾ.ಪ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಭಾಷೆ ಉಳಿದರೆ ಜನಾಂಗ ಉಳಿದಂತೆ, ಭಾಷೆ ಕಲಿಯುವದು ಮನುಷ್ಯನ ನಡುವಿನ ಸಂಪರ್ಕ ಬೆಸೆಯಲು ಸಹಕಾರಿ. ಹಲವು ಭಾಷೆಗಳನ್ನು ಕಲಿಯುವ ಮೂಲಕ ಅಲ್ಲಿನ ಸಂಸ್ಕøತಿಯನ್ನು ತಿಳಿದುಕೊಳ್ಳಬಹುದು. ನಮ್ಮ ಭಾಷೆಯನ್ನು ಇತರ ಭಾಷಿಕರಿಗೆ ಕಲಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಪಸರಿಸಲು ಕಾರಣಕರ್ತರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಮಹಾಲಕ್ಷ್ಮಿ ಮೋಟಾರ್ಸ್ ಮಾಲೀಕ ಮಚ್ಚಮಾಡ ಸತೀಶ್ ಅಯ್ಯಣ್ಣ, ಶಾಲಾ ಆಡಳಿತ ಮಂಡಳಿ ನಿರ್ದೇಶಕರುಗಳಾದ ವಸಂತ್, ಮೋಹನ್, ಕರುಂಬಯ್ಯ, ಸಚಿನ್, ದಿನೇಶ್ ಚಿಟ್ಟಿಯಪ್ಪ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯೆ ನೂರೇರ ರತಿ ಅಚ್ಚಪ್ಪ, ತಾಲೂಕು. ಕ.ಸಾ.ಪ ಕಾರ್ಯದರ್ಶಿ ರೇಖಾ ಶ್ರೀಧರ್, ಜಗದೀಶ್ ಜೋಡುಬೀಟಿ ಉಪಸ್ಥಿತರಿದ್ದರು.