ಸೋಮವಾರಪೇಟೆ, ಜ. 17: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ಜರುಗಿದ 59ನೇ ಮಹಾ ರಥೋತ್ಸವ ಹಾಗೂ ಜಾತ್ರೋತ್ಸವದಲ್ಲಿ ಅಳವಡಿಸಲಾಗಿದ್ದ ವಸ್ತು ಪ್ರದರ್ಶನ ಸಾವಿರಾರು ಕೃಷಿಕರನ್ನು ಆಕರ್ಷಿಸುವಲ್ಲಿ ಸಫಲವಾಯಿತು.
ದೇವಾಲಯ ಸಮಿತಿ, ಕೃಷಿ, ತೋಟಗಾರಿಕೆ ಇಲಾಖೆ ವತಿಯಿಂದ ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ವಸ್ತು ಪ್ರದರ್ಶನದಲ್ಲಿ ವಿವಿಧ ಕೃಷಿ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ಪ್ರಧಾನ ಪ್ರದೇಶವಾಗಿರುವ ಶಾಂತಳ್ಳಿ, ದೊಡ್ಡತೋಳೂರು, ಸೂರ್ಲಬ್ಬಿ, ಬೇಕನಳ್ಳಿ, ಕುಂದಳ್ಳಿ, ಸುಳ್ಯ, ಕಲ್ಲಪಳ್ಳಿ ಸೇರಿದಂತೆ ಇನ್ನಿತರ ಭಾಗಗಳಿಂದ ಕೃಷಿ ವಸ್ತುಗಳನ್ನು ತರಲಾಗಿತ್ತು.
ವಿವಿಧ ಬಗೆಯ ಮೊಟ್ಟೆಗಳು, ಶುಂಠಿ, ಗೆಣಸು, ತರಕಾರಿ, ಮಣ್ಣಿನ ಕಲಾಕೃತಿ, ಹಣ್ಣು ಹಂಪಲು, ಕಬ್ಬು, ಕರಕುಶಲ ವಸ್ತುಗಳು, ಕಿತ್ತಳೆ ಸೇರಿದಂತೆ ಇತರ ವಸ್ತುಗಳನ್ನು ಕೃಷಿಕರು ತಂದು ಪ್ರದರ್ಶನಕ್ಕೆ ಇಟ್ಟಿದ್ದರು. ಇದರೊಂದಿಗೆ ಕಳೆಕೊಚ್ಚುವ ಯಂತ್ರ, ಕ್ರಿಮಿ ನಾಶಕಗಳು, ವಿವಿಧ ಬಗೆಯ ಸಾವಯವ ಗೊಬ್ಬರಗಳ ಮಾಹಿತಿಗಳನ್ನು ಇಲಾಖಾಧಿಕಾರಿಗಳು ರೈತರಿಗೆ ಒದಗಿಸುತ್ತಿದ್ದರು.
ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕೃಷಿಕ ಎಲ್.ಕೆ. ಚಂದ್ರಶೇಖರ್ ಅವರು ತಮ್ಮ ತೋಟದಲ್ಲಿ ಬೆಳೆದಿದ್ದ ಬೃಹತ್ ಹುತ್ತರಿ ಗೆಣಸನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಸಾವಿರಾರು ಮಂದಿಯನ್ನು ಆಕರ್ಷಿಸಿತು. ಸುಮಾರು 2 ಮೀಟರ್ ಉದ್ದಕ್ಕೆ ಚಾಚಿಕೊಂಡಿದ್ದ ಹುತ್ತರಿ ಗೆಣಸನ್ನು ಎಲ್ಲರೂ ಆಶ್ಚರ್ಯ ಚಕಿತರಾಗಿ ವೀಕ್ಷಿಸಿದರು.
ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ಪ್ರತಿ ವರ್ಷ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ನೀಡ ಲಾಗುತ್ತಿದೆ. ಕೃಷಿಕರೂ ಸಹ ಹೆಚ್ಚಿನ ಉತ್ಸಾಹದಿಂದ ವಸ್ತು ಪ್ರದರ್ಶನಕ್ಕೆ ತಮ್ಮ ಕೃಷಿ ಬೆಳೆಗಳನ್ನು ತರುತ್ತಿದ್ದಾರೆ. ಪಟ್ಟಣ ಪ್ರದೇಶದವರು ಗ್ರಾಮೀಣ ಭಾಗದ ವಿವಿಧ ತರಕಾರಿಗಳನ್ನು ನೋಡಿ ಸಂತಸ ಪಡುತ್ತಾರೆ ಎಂದು ದೇವಾಲಯ ಸಮಿತಿ ಪ್ರಮುಖ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.