ಮಡಿಕೇರಿ, ಜ. 17: ಮೊನ್ನೆಯಷ್ಟೇ ಈ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿ, ಮುಂದಿನ ವಿಧಾನಸಭಾ ಚುನಾವಣಾ ತಯಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಆ ಬೆನ್ನಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳು ಕೂಡ ತಯಾರಿಗೆ ಮುಂದಾಗಿರುವ ಸುಳಿವು ಲಭಿಸಿದೆ. ಅದಕ್ಕೆ ಸಾಕ್ಷಿ ನಮ್ಮ ಭಾವೀ ಪ್ರಜೆಗಳಾದ ಪುಟಾಣಿ ಮಕ್ಕಳು!

ಅವರ ಪ್ರಕಾರ ನಾಲ್ಕೈದು ವರ್ಷಗಳ ಹಿಂದೆ, ಯಾರೋ ದಾನಿಗಳು ಕಟ್ಟಿಸಿಕೊಟ್ಟಿದ್ದ ಶಾಲೆಯ ಕಟ್ಟಡದೊಳಗೆ ಪಾಠ ಕಲಿಯುತ್ತಿದ್ದರಂತೆ. ಈ ಕಟ್ಟಡದ ಸುತ್ತಲು ಕಾಡು ಬೆಳೆದು ತರಗತಿಗಳಿಗೆ ಹಾವು ಇತ್ಯಾದಿ ಬಂದು ಸೇರ ತೊಡಗಿತ್ತಂತೆ. ಹಾಗಾಗಿ ಆ ಕೊಠಡಿಗಳನ್ನು ಖಾಲಿ ಮಾಡಿ ಬೇರೆಡೆ ಇರುವ ಹಳೆಯ ಶಾಲಾ ಕೊಠಡಿಯಲ್ಲೇ ಕಲಿಯುತ್ತಿದ್ದಾರಂತೆ.

ಈ ಮಕ್ಕಳಿಗೆ ಪಾಠ ಹೇಳಿ ಕೊಡುವ ಶಿಕ್ಷಕರಿಗೆ ಸಂಬಂಧಪಟ್ಟವರು ಸರಿಯಾಗಿ ಸಂಬಳ ಕೂಡ ಕೊಡದೆ, ಪ್ರತಿಷ್ಠೆಗಾಗಿ ನಗರದೊಳಗೆ ಈ ಶಾಲೆಯನ್ನು ತಮ್ಮದೆಂದು ಕೊಳ್ಳುತ್ತಿದ್ದಾರಂತೆ, ಅಲ್ಲದೆ ಇದುವರೆಗೆ ಕಾಡು ಬೆಳೆದು ಹೋಗಿದ್ದ ಶಾಲಾ ಕಟ್ಟಡದ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು ಸುಟ್ಟು ಹಾಕಿದ್ದಾರಂತೆ.

ಮಾತ್ರವಲ್ಲದೆ ರಾಜಕಾರಣಿಗಳು ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎನ್ನುವಂತೆ, ಈ ಪುಟಾಣಿಗಳನ್ನು ಬಳಸಿಕೊಂಡು ಇದುವರೆಗೆ ಪಾಳು ಬಿದ್ದಿದ್ದ ಕಟ್ಟಡ ವನ್ನು ಶುಚಿಗೊಳಿಸತೊಡಗಿದ್ದಾರೆ. ಕಾರಣ ಈ ಪುಟಾಣಿಗಳು ಹೇಳುವಂತೆ ಆ ಕಟ್ಟಡ ಮುಂದಿನ ವಿಧಾನಸಭಾ ಚುನಾವಣೆಯ ಮತಗಟ್ಟೆಯಂತೆ!? ಈ ಪುಟಾಣಿಗಳಿಗೆ ಇನ್ನೇನು ವಾರ್ಷಿಕ ಪರೀಕ್ಷೆ ಸಮೀಪಿಸಲಿದೆ. ಅವರು ನಾಲ್ಕು ಅಕ್ಷರ ಕಲಿಯಲಿ. ಶ್ರಮಪಟ್ಟು ಓದಿಕೊಳ್ಳಲಿ ಎಂಬ ಕಾಳಜಿ ನಮ್ಮ ಜವಾಬ್ದಾರಿ ಹೊತ್ತವರಿಗಿಲ್ಲ? ಬದಲಾಗಿ ಚುನಾವಣಾ ಮತಗಟ್ಟೆಯ ಸಿದ್ಧತೆ ಆಡಳಿತಶಾಹಿತ್ವಕ್ಕೆ ಇಲ್ಲಿ ಮುಖ್ಯವೆನಿಸಿದೆಯಂತೆ. ತಮ್ಮ ಸ್ವಾರ್ಥದ ಸೌಧ ಕಟ್ಟಿಕೊಳ್ಳಲು ಶಿಕ್ಷಕರನ್ನು, ಮಕ್ಕಳನ್ನು ಬಳಸಿಕೊಂಡು ಈ ರೀತಿ ಬೇಳೆ ಬೇಯಿಸಿ ಕೊಳ್ಳುತ್ತಾರೆ. ಕೇಳುವವರಾರು? ಈ ಮಂದಿಯನ್ನು...? - ಮಿರರ್