ಮಡಿಕೇರಿ, ಜ. 17: ಆಶಾ ಕಾರ್ಯಕರ್ತೆಯರು, ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕತೆಯರು ಹಾಗೂ ಇತರ ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದಿಂದ ದೇಶದ ಪ್ರಧಾನ ಮಂತ್ರಿಗಳಿಗೆ ಮನವಿ ರವಾನಿಸಲಾಯಿತು.

ಬೇರೆ ಬೇರೆ ರಂಗದ ಅಸಂಘಟಿತ ದಿನಗೂಲಿಗಳನ್ನು ಕಾರ್ಮಿಕರೆಂದು ಪರಿಗಣಿಸಿ ಮಾಸಿಕ ಕನಿಷ್ಟ ರೂ. 18 ಸಾವಿರ ವೇತನ ನೀಡುವದರೊಂದಿಗೆ ರೂ. 3 ಸಾವಿರದಂತೆ ಪಿಂಚಣಿ ನೀಡಲು ಆಗ್ರಹಿಸಲಾಯಿತು. ಅಲ್ಲದೆ ಕೇಂದ್ರ ಸರಕಾರವು ಎಲ್ಲ ಮೂಲಭೂತ ಸೌಲಭ್ಯಗಳನ್ನು ಈ ಕಾರ್ಮಿಕರಿಗೂ ನೀಡಬೇಕೆಂದು ಮತ್ತು ಖಾಸಗಿ ಏಜೆನ್ಸಿಗಳಿಗೆ ಈ ಕಾರ್ಮಿಕರ ನಿರ್ವಹಣೆಯನ್ನು ಕಲ್ಪಿಸದೆ, ನೇರವಾಗಿ ಸರಕಾರವೇ ಸವಲತ್ತು ಒದಗಿಸಬೇಕೆಂದು ಆಗ್ರಹಿಸಿದರು.