ಸೋಮವಾರಪೇಟೆ,ಜ.17: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಧಾಳಿ ನಡೆಸಿ ಕಾಫಿ ತೋಟ ಸೇರಿದಂತೆ ಕೃಷಿ ಫಸಲನ್ನು ನಷ್ಟಗೊಳಿಸಿರುವ ಘಟನೆ ನಡೆದಿದ್ದು, ಕೃಷಿಕರು ಆತಂಕಕ್ಕೀಡಾಗಿದ್ದಾರೆ.

ತೋಟದಲ್ಲಿದ್ದ ಕಾಫಿ ಗಿಡ, ಬಾಳೆ ಗಿಡ, ನೆರಳಿಗೆಂದು ನೆಡಲಾಗಿದ್ದ ಪಾನುವಾಳ ಸೇರಿದಂತೆ ಇನ್ನಿತರ ಮರಗಳನ್ನು ತುಳಿದು ನಾಶಗೊಳಿಸಿ ರುವ ಕಾಡಾನೆಗಳು, ಕೃಷಿಕರಿಗೆ ಸಾವಿರಾರು ರೂಪಾಯಿ ನಷ್ಟ ಗೊಳಿಸಿವೆ. ಕೂತಿ ಗ್ರಾಮದ ಕೆ.ಸಿ. ಉದಯಕುಮಾರ್, ಬಿ.ಜಿ. ಗಣೇಶ್, ಡಿ.ಎಸ್. ಸೋಮಶೇಖರ್ ಸೇರಿದಂತೆ ಇನ್ನಿತರ ಕೃಷಿಕರಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು, ಸುಮಾರು 200ಕ್ಕೂ ಅಧಿಕ ಕಾಫಿ ಗಿಡಗಳು, ಫಸಲು ಬಿಟ್ಟಿದ್ದ ಬಾಳೆ ಗಿಡ ಸೇರಿದಂತೆ ಇತರ ಮರಗಳನ್ನು ನಾಶಗೊಳಿಸಿವೆ.

ಈ ಭಾಗದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು, ಗ್ರಾಮಸ್ಥರ ನಿದ್ದೆಗೆಡಿಸಿವೆ. ಕೊಡಗು-ಹಾಸನ ಗಡಿಭಾಗವಾಗಿರುವ ಈ ಪ್ರದೇಶದಲ್ಲಿ ಸಂಚರಿಸಲೂ ಸಹ ಜನ ಹಿಂದೇಟು ಹಾಕುವಂತಾಗಿದೆ. ಸುಮಾರು 8 ರಿಂದ 10 ಆನೆಗಳನ್ನು ಹೊಂದಿರುವ ಹಿಂಡು ಕೂತಿ, ನಗರಳ್ಳಿ, ಕುಂದಳ್ಳಿ, ಬಾಣಗೇರಿ, ಮಾಗೇರಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಜನತೆ ಜೀವಭಯದಿಂದ ದಿನ ದೂಡು ವಂತಾಗಿದೆ.

ಹಗಲಿನ ವೇಳೆ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲೂ ಸಹ ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲೂ ಹಿಂದೇಟು ಹಾಕು ವಂತಾಗಿದೆ. ಕಾಡಾನೆಗಳ ಹಾವಳಿ ಯಿಂದ ಕೃಷಿ ಫಸಲು ನಷ್ಟಗೊಂಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿಕೊಡಬೇಕು. ನಿರಂತರ ಧಾಳಿ ನಡೆಸುತ್ತಿರುವ ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾಮಸ್ಥರಿಂದ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಗ್ರಾಮಸ್ಥ ಕೆ.ಟಿ. ಉದಯಕುಮಾರ್ ಎಚ್ಚರಿಸಿದ್ದಾರೆ.