ಮಡಿಕೇರಿ, ಜ. 17: ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದು ಪ್ರತಿಭಟನೆ ನಡೆಸಿದರು. ನಗರದಲ್ಲಿ ಪ್ರತಿಭಟನೆಯೊಂದಿಗೆ ಸರಕಾರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಮನವಿ ಪತ್ರ ರವಾನಿಸಿದರು.

ಕಾರ್ಮಿಕ ಕಾಯ್ದೆಯಡಿ ಕನಿಷ್ಟ ಮಾಸಿಕ ವೇತನ ರೂ. 18 ಸಾವಿರದೊಂದಿಗೆ ಪಿಂಚಣಿ ರೂ. 3 ಸಾವಿರದಂತೆ ನೀಡುವದು, ಮಾತೃಪೂರ್ಣ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳ ಮನೆಗಳಿಗೆ ತಲಪಿಸಲು ವ್ಯವಸ್ಥೆ ಕಲ್ಪಿಸುವದು, ಮಿನಿ ಅಂಗನವಾಡಿಗಳನ್ನು ಪೂರ್ಣ ಪ್ರಮಾಣದಲ್ಲಿ ರೂಪಿಸಿ ಸಹಾಯಕಿಯರನ್ನು ನೇಮಿಸುವದು, ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ತಮ್ಮ ಅನುಭವದಂತೆ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಸಂಘಟನೆ ಪ್ರಮುಖರಾದ ತಾರಾಮಣಿ, ಪುಷ್ಪ, ಗೀತಾ, ಶಾರದಾ, ನಾಗರತ್ನ, ಪವಿತ್ರ, ಚಂದ್ರಕಲಾ, ಮೋಹನಾಕ್ಷಿ ಮೊದಲಾದವರು ನೇತೃತ್ವ ವಹಿಸಿದ್ದರು.