ಕೂಡಿಗೆ, ಜ. 15: ಸೈನಿಕ ಶಾಲೆಯಲ್ಲಿ ಬೆಂಗಳೂರು ಪ್ರೋ ಅರ್ಥ್ ಫೌಂಡೇಷನ್ ಹಾಗೂ ಕರ್ನಾಟಕ ಸರ್ಕಾರ ಶಕ್ತಿ ಪುನರ್ ಬಳಕೆ ಕೇಂದ್ರ (ಕ್ರೆಡಲ್) ಇವರ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಿತು.
ಬೆಂಗಳೂರು ಪ್ರೋ ಅರ್ಥ್ ಫೌಂಡೇಷನ್‍ನ ಸಂಸ್ಥಾಪಕ ನವೀನ್ ಶಂಕರಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭಾವಿ ಬದುಕಿನಲ್ಲಿ ಸೌರಶಕ್ತಿಯ ಬಳಕೆಯನ್ನಾಧರಿಸಿ ತಮ್ಮ ಸ್ವ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಕಾರ್ಯಾಗಾರವನ್ನು ಶಾಲೆಯ 8 ರಿಂದ 10ನೇ ತರಗತಿಯ ಮಕ್ಕಳಿಗೆ ಆಯೋಜಿಸಲಾಗಿತ್ತು. 5 ತಂಡಗಳನ್ನಾಗಿ ಮಾಡಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಪ್ರೋ ಅರ್ಥ್ ಫೌಂಡೇಷನ್‍ನ ಸಹ ಸಂಸ್ಥಾಪಕಿ ಮುಫಾಸಿರಿನ್ ಅಹಮದ್, ವಿಜ್ಞಾನ ಶಿಕ್ಷಕ ಪ್ರಸಾದ್ ರಾಜು, ಶಾಲೆಯ ಕೆಡೆಟ್ ಮಹಮದ್ ಸೈಫ್, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.