ಸೋಮವಾರಪೇಟೆ, ಜ. 15: ಸ್ವಾಮಿ ವಿವೇಕಾನಂದ ಜಯಂತ್ಯೋ ತ್ಸವ ಸಮಿತಿ ವತಿಯಿಂದ ತಾ. 25 ರಂದು ಸೋಮವಾರಪೇಟೆಯಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಇಲ್ಲಿನ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ಆಶ್ರಯದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ 155ನೇ ಜನ್ಮ ದಿನಾಚರಣೆಯೊಂದಿಗೆ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷಾಚರಣೆಯೂ ಆಗಿರುವದರಿಂದ ಈ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸುವಂತೆ ಸಮಿತಿಯ ಅಧ್ಯಕ್ಷ ಬಿ.ಎಸ್. ಸದಾನಂದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ತಾ. 25 ರಂದು ಮಾನಸ ಹಾಲ್‍ನಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಛದ್ಮವೇಶ, ಚಿತ್ರಕಲಾ ಸ್ಪರ್ಧೆ, ಪ್ರೌಢ ಶಾಲಾ ವಿಧ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸುವಂತೆ, ತಾ. 31 ರಂದು ಸಾರ್ವಜನಿಕ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಎಸ್. ಮಹೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ರೋಟರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಪಟೇಲ್, ಸಮಿತಿ ಖಜಾಂಚಿ ಮೃತ್ಯುಂಜಯ ಉಪಸ್ಥಿತರಿದ್ದರು. ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದರು.