ಮಡಿಕೇರಿ, ಜ. 15: ಯುವ ಜನತೆ ದೇಶದ ಭವಿಷ್ಯ ನಿರ್ಮಾಪಕರು, ಯುವ ಜನರಲ್ಲಿನ ಪ್ರತಿಭೆ ಹಾಗೂ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಯುವ ಜನತೆಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ ಹಾಗೂ ಆದರ್ಶ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪವನೇಶ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮತ್ತು ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗ, ಎಫ್.ಎಂ.ಕೆ.ಎಂ.ಸಿ. ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಕಾನೂನು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಪರ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಕಾಮತ್ ಮಾತನಾಡಿ, ದೇಶದ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವದು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ವಿದ್ಯಾರ್ಥಿ ಜೀವನ ಮುಂದಿನ ಜೀವನಕ್ಕೆ ಬುನಾದಿ ಇದ್ದಂತೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲ ಎಂ.ಎ. ನಿರಂಜನ್ ಮಾತನಾಡಿ, ಯುವ ಜನರಿಗೆ ನಕರಾತ್ಮಕ ಚಿಂತನೆಗಳನ್ನು ಹೇಳುವದನ್ನು ಬಿಟ್ಟು ಸಕಾರಾತ್ಮಕ ಚಿಂತನೆ ತುಂಬಬೇಕಿದೆ ಎಂದು ತಿಳಿಸಿದರು.

ನಮ್ಮ ನಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಲು ಕಲಿತುಕೊಂಡರೆ ದೇಶದ ಅಭಿವೃದ್ಧಿಗೆ ಕೊಡುವ ಕಾಣಿಕೆಯಾಗಿದೆ. ಜೀವನವನ್ನು ನೆಮ್ಮದಿಯಿಂದ ಸಾಗಿಸಬೇಕಾದರೆ ಕಾನೂನು ಬಗ್ಗೆ ತಿಳಿದುಕೊಳ್ಳುವದು ಅತ್ಯಂತ ಅವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಫ್.ಎಂ.ಕೆ.ಎಂ.ಸಿ. ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಉಪನ್ಯಾಸಕ ಶಬೀರ್ ಪಾಷ್ ಇತರರು ಇದ್ದರು. ಜಯಪ್ಪ ಅವರು ಸ್ವಾಗತಿಸಿದರು, ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿ, ನಿರೂಪಿಸಿದರು, ಹೇಮಂತ ವಂದಿಸಿದರು.