ಕುಶಾಲನಗರ, ಜ. 15: ನದಿ ತಟಗಳು ಸಂಸ್ಕøತಿಯ ಉಗಮಸ್ಥಾನವಾಗಿದ್ದು ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದು ಪತ್ರಕರ್ತ ಕೆ.ಬಿ. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ನದಿ ತಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ಹರೀಶ್ ಮಾತನಾಡಿ, ಕ್ಷೇತ್ರ ಯೋಜನೆ ಮೂಲಕ ಕಳೆದ 3 ವರ್ಷಗಳಿಂದ ಪ್ರಾರ್ಥನಾ ಮಂದಿರಗಳು, ಶ್ರದ್ಧಾ ಕೇಂದ್ರಗಳು ಹಾಗೂ ನದಿ ತಟಗಳನ್ನು ಸ್ವಚ್ಛತೆ ಮಾಡುವ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಕುಶಾಲನಗರ ಒಕ್ಕೂಟದ ಅಧ್ಯಕ್ಷರಾದ ಭಾನು ಗುಲ್ಜಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿವಿ 9 ಜಿಲ್ಲಾ ವರದಿಗಾರ ಕೆ.ಬಿ. ಮಂಜುನಾಥ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭೋಜಣ್ಣ ರೆಡ್ಡಿ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಕಾವೇರಿ ನದಿ ಜಾಗೃತಿ ಸಮಿತಿಯ ಸಂಚಾಲಕ ಡಿ.ಆರ್. ಸೋಮಶೇಖರ್, ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಮಾಜಿ ಅಧ್ಯಕ್ಷ ಕೆ.ಆರ್. ಶಿವಾನಂದನ್, ಗಣಪತಿ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕರವೇ ನಗರಾಧ್ಯಕ್ಷ ಬಿ.ಜೆ. ಅಣ್ಣಯ್ಯ, ಸೇವಾ ಪ್ರತಿನಿಧಿಗಳಾದ ವಿಜಯಲಕ್ಷ್ಮಿ, ಡಾಟಿ, ಯಶೋಧ, ಜಯಲಕ್ಷ್ಮಿ, ಗಿರಿಜಾ ಇದ್ದರು.