ಎಂ.ಪಿ. ಕೇಶವ ಕಾಮತ್
*ಗೋಣಿಕೊಪ್ಪಲು, ಜ. 15: ಸಾಹಿತ್ಯ ಜನಸಾಮಾನ್ಯರನ್ನು ತಲುಪುವ ಸಾಧನವಾಗಬೇಕು. ಸಾಹಿತ್ಯವೆಂದರೆ ಕೇವಲ ಪುಸ್ತಕ ರಚನೆಯಲ್ಲ. ಅದು ಜನರ ಮನದ ಮಿಡಿತವಾಗಬೇಕು ಎಂದು ಕೊಡಗು ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಿಷಯ ಮಂಡಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ ಆಶ್ರಯದಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಎಸ್.ಎಸ್. ರಾಮಮೂರ್ತಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳು ಮತ್ತು ಕಲಾವಿದರ ಕೊಡುಗೆ ಎಂಬ ವಿಚಾರವಾಗಿ ಮಾತನಾಡಿದರು.
ಯಾವದೇ ದಾಖಲಾತಿಗಳಿಲ್ಲದೆ ಜನರಿಂದ ಜನರಿಗೆ ಹರಡಿದ ಪದಗಳು ಇಂದು ಶ್ರೇಷ್ಠ ಸಾಹಿತ್ಯವೆನಿಸಿಕೊಂಡಿವೆ. ಇಂತಹ ಸಾಹಿತ್ಯದ ಬೆಳವಣಿಗೆ ಇಂದು ಮೂಡಬೇಕಾಗಿದೆ ಎಂದು ಹೇಳಿದರು. ಪ್ರತಿಯೊಬ್ಬನಲ್ಲಿಯೂ ಆಲೋಚನಾ ಲಹರಿ ಅರಿಯುವದೇ ಭಾಷೆಯೆಂಬ ಮಾಧ್ಯಮದ ಮುಖಾಂತರವೆ.
ಪ್ರಾಣಿಗಳಿಗೂ ಅದರದೇ ಆದ ಭಾಷೆಯಿದೆ. ಭಾಷೆ ಹುಟ್ಟಿನಿಂದ ಬಂದಿದ್ದಲ್ಲ. ಭಾಷೆ ತನ್ನ ಬೆಳವಣಿಗೆಗೆ ಸಾಹಿತ್ಯದ ಮೊರೆ ಹೋಗ ಬೇಕಾಗುತ್ತದೆ. ಸಾಹಿತ್ಯ ಹಾಗೂ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ದತ್ತಿ ಉಪನ್ಯಾಸಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ವಿಚಾರಧಾರೆಯನ್ನು ಹರಿಬಿಡುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೌಢಶಾಲೆ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ, ವಿದ್ಯಾರ್ಥಿಗಳು ಪ್ರತಿ ಯೊಬ್ಬರ ನಡೆನುಡಿಗಳನ್ನು ಗ್ರಹಿಸಿ ಉತ್ತಮ ವಾದದ್ದನ್ನು ಸಂಗ್ರಹಿಸಿಕೊಂಡು ತಮ್ಮ ಬೆಳವಣಿಗೆಯಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ವಿದ್ಯಾರ್ಥಿಗಳು ಮುಂದಾಗಬೇಕು. ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಸಾಹಿತ್ಯ ಅಧ್ಯಯನದ ಮೂಲಕ ಕನ್ನಡ ಬೆಳವಣಿಗೆಗೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ನೂರೇರ ರತಿ ಅಚ್ಚಪ್ಪ, ಶಾಲಾ ಮುಖ್ಯೋಪಾಧ್ಯಾಯ ರತೀಶ್ ರೈ, ವಿಶೇಷ ಆಹ್ವಾನಿತ ಅತಿಥಿಗಳಾಗಿ ಕ.ಸಾ.ಪ. ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡು ಬೀಟಿ, ಗೌರವ ಕಾರ್ಯದರ್ಶಿ ರೇಖಾ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಚಮ್ಮಟಿರ ಪ್ರವೀಣ್ ಉತ್ತಪ್ಪ ಉಪಸ್ಥಿತರಿದ್ದರು.