ಭಾಗಮಂಡಲ, ಜ. 15: ಪುರಾಣಗಳಲ್ಲಿ ಕಂಡುಬಂದಿರುವ ಕೊಡವರು ಹಾಗೂ ಅಮ್ಮಕೊಡವರ ಮೇಲಿನ ಶಾಪ ವಿಮೋಚನೆ ಮತ್ತು ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿನ ದೋಷ ನಿವಾರಣೆಗೆ ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿತು.ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಮುಂಭಾಗದ ಬಯಲು ಪ್ರದೇಶದಲ್ಲಿ ಪುತ್ತೂರಿನ ಕೆಮ್ಮಿಂಜೆಯ ವೇದಬ್ರಹ್ಮ ಸುಬ್ರಹ್ಮಣ್ಯ ಬಳ್ಳುಕರಾಯ ಮತ್ತು ತಂಡದಿಂದ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸೇರಿದಂತೆ ವಿಶೇಷ ಪೂಜಾದಿ ವಿಧಾನಗಳು ನಡೆಯಿತು. ಇದೇ ಸಂದರ್ಭ ಜಿಲ್ಲಾ ಹವ್ಯಕ ಪರಿಷತ್ ವತಿಯಿಂದ ಕುಮಾರ್ ಮತ್ತು ಜಿ.ಆರ್. ರವಿಶಂಕರ್ ನೇತೃತ್ವದಲ್ಲಿ ರುದ್ರಪಠಣ ನಡೆಯಿತು. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಭಟ್ ಅವರಿಂದ ರುದ್ರಾಭಿಷೇಕ ಜರುಗಿತು.

ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಹಾಜರಿದ್ದು, ಕೊಡವ, ಅಮ್ಮಕೊಡವ ಜನಾಂಗಕ್ಕೆ ಹಿಂದಿನ ಋಷಿಮುನಿಗಳ ಶಾಪದ ಹಿನ್ನೆಲೆಯಲ್ಲಿ ಮತ್ತು ನಾಡಿನ ಶಾಂತಿ ಹಾಗೂ ಸುಭಿಕ್ಷೆಗಾಗಿ ಸರ್ವರ ಕಲ್ಯಾಣಕ್ಕಾಗಿ ಈ ಪೂಜಾದಿಗಳನ್ನು 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವದಾಗಿ ಪದಾಧಿಕಾರಿಗಳು ತಿಳಿಸಿದರು.

ಇದೇ ಸಂದರ್ಭ ಜನಾಂಗಗಳ ಶಾಪ ವಿಮೋಚನೆಗಾಗಿ ಮತ್ತು ಸರ್ವರ ಕಲ್ಯಾಣಕ್ಕಾಗಿ ಶ್ರೀಭಗಂಡೇಶ್ವರ ಸನ್ನಿಧಿಯಲ್ಲಿ ಜಿ. ರಾಜೇಂದ್ರ ಪ್ರಾರ್ಥನೆ ನೆರವೇರಿಸಿದರು.

ಪೂಜಾದಿ ವಿಧಿವಿಧಾನಗಳಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ, ಉಪಾಧ್ಯಕ್ಷ ಸಿ.ಎಂ. ಪೊನ್ನಪ್ಪ, ಟ್ರಸ್ಟಿಗಳಾದ ಅಲ್ಲಾರಂಡ ಬೀನಾ ಬೊಳ್ಳಮ್ಮ, ಕಾಡ್ಯಮಾಡ ಗಿರೀಶ್ ಗಣಪತಿ, ಪ್ರಥ್ಯು, ಚೆಯ್ಯಂಡ ಸತ್ಯ, ಚಂಗಪ್ಪ, ಕೋಡಿ ಪೊನ್ನಪ್ಪ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್ ಹಾಗೂ ಇನ್ನಿತರರು ಇದ್ದರು.