ಮಡಿಕೇರಿ, ಜ. 15: ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಪುಣ್ಯ ಕಾಲದಲ್ಲಿನ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸುಗ್ಗಿ ಹಬ್ಬವೆಂದೇ ಹೇಳಲಾಗುವ ಸಂಕ್ರಾಂತಿಯ ಸಂಭ್ರಮವನ್ನು ಮುತ್ತೈದೆಯರು, ಹೆಂಗಳೆಯರು ಎಳ್ಳು-ಬೆಲ್ಲ ಬೀರುವ ಮೂಲಕ ಕೊಂಡಾಡಿದರೆ, ಪುರುಷರಾದಿಯಾಗಿ ಆಸ್ತಿಕ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರದೊಂದಿಗೆ ಹಬ್ಬಾಚರಿಸಿದರು.ಮಕರ ಸಂಕ್ರಾಂತಿ ಹಬ್ಬವನ್ನು ನಿನ್ನೆದಿನ ನಾಡಿನಾದ್ಯಂತ ಜನತೆ ಸಂಭ್ರಮ-ಸಡಗರದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಅದರಲ್ಲೂ ಅಯ್ಯಪ್ಪ ಹಾಗೂ ಸುಬ್ರಹ್ಮಣ್ಯ ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ, ಹವನಾದಿಗಳೊಂದಿಗೆ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಡಿಕೇರಿಯ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ 28ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ಆಚರಿಸಲಾಯಿತು. ಪ್ರಾತಃಕಾಲ 6.30 ರಿಂದ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ಗಣಪತಿ ಹೋಮ, ಅಭಿಷೇಕ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಮಧ್ಯಾಹ್ನ ನೆರೆದಿದ್ದ ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ ಅಲಂಕಾರ ಪೂಜೆ, ಪಡಿಪೂಜೆ, ದೀಪಾರಾಧನೆ, ಪ್ರಸಾದ ವಿತರಣೆ ನೆರವೇರಿತು. ಅರ್ಚಕ ಗುರುಭಟ್ ನೇತೃತ್ವದ ತಂಡ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಗೌರವ ಕಾರ್ಯದರ್ಶಿ ವಿನೋದ್ ಕುಮಾರ್, ಉಣ್ಣಿಕೃಷ್ಣ, ಟಿ.ಎಸ್. ಪ್ರಕಾಶ್, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್, ಡಾ. ಪಾಟ್ಕರ್ ಮುಂತಾದವರಿದ್ದರು.
(ಮೊದಲ ಪುಟದಿಂದ)
ಮಕ್ಕಂದೂರು: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಆದಂ ಎಸ್ಟೇಟ್‍ನಲ್ಲಿರುವ ಶ್ರೀ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು. ಚಾಮುಂಡಿ ಹಾಗೂ ನಾಗದೇವನಿಗೂ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ನೂರಿತ್ತಾಯ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭ ತೋಟದ ವ್ಯವಸ್ಥಾಪಕ ಅಯ್ಯಪ್ಪ, ತಕ್ಕರಾದ ಅಯ್ಯಕುಟ್ಟಿರ ಕುಟುಂಬಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಇಲ್ಲಿನ ಶ್ರೀವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ವಾದ್ಯಗೋಷ್ಠಿ ಯೊಂದಿಗೆ ಕಳಸಹೊತ್ತ ಮಹಿಳೆಯರು ಭಗವಾಧ್ವಜ ಹಿಡಿದ ಪುರುಷರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶ್ರೀ ಮುತ್ತಪ್ಪ ಹಾಗೂ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೊಂಗಲ್ ತಯಾರಿಸಿ ದೇವಿಗೆ ಅರ್ಪಿಸಿ ಮಹಾಮಂಗಳಾರತಿ ನಡೆಸಲಾಯಿತು.
ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಪೊಂಗಲ್ ಆಚರಣಾ ಸಮಿತಿಯವರು ಪೂಜೆ ಸಲ್ಲಿಸಿದರು.
ಕೂಡಿಗೆ: ಕೂಡಿಗೆ, ಕೂಡು ಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳಲ್ಲಿ ಮಕರ ಜ್ಯೋತಿಯ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು.
ಸಂಕ್ರಾಂತಿ ಹಬ್ಬದಂದು ಮಹಿಳೆಯರು ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಪರಸ್ಪರ ಎಳ್ಳುಬೆಲ್ಲ ವಿತರಿಸಿ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡರು.
ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಹೊಸ ಉಡುಗೆ ತೊಡುಗೆ ತೊಟ್ಟು, ಮನೆಯನ್ನು ಸಿಂಗರಿಸಿ, ಮನೆಯ ಮುಂಭಾಗದಲ್ಲಿ ವಿವಿಧ ಆಕರ್ಷಣೀಯ ರಂಗೋಲಿಯನ್ನು ಹಾಕುವದರ ಮೂಲಕ ಹಬ್ಬಾಚರಣೆಗೆ ಕಳೆ ತಂದರು. ರೈತರು ತಮ್ಮ ಹಸುಗಳನ್ನು ಸ್ನಾನ ಮಾಡಿಸಿ, ಹೂಗಳಿಂದ ಸಿಂಗರಿಸಿ ಪೂಜಿಸಿದರು.
ವೀರಾಜಪೇಟೆ: ಸುಗ್ಗಿ ಹಬ್ಬ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿಯನ್ನು ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿ ನಿನ್ನೆ ದಿನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮಕರ ಸಂಕ್ರಾಂತಿ ಉತ್ಸವ ಹಾಗೂ ಮಕರ ಜ್ಯೋತಿಯ ಪ್ರಯುಕ್ತ ಭಕ್ತಾದಿಗಳು, ಮುತ್ತೈದೆಯರು ಬೆಳಗ್ಗಿನಿಂದಲೇ ದೇವಾಲಯಕ್ಕೆ ಬಂದು ಅಯ್ಯಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದರು. ದೇವಾಲಯದಲ್ಲಿ ಅಯ್ಯಪ್ಪನಿಗೆ ವಿವಿಧ ಅಭಿಷೇಕಗಳು, ನೈವೇದ್ಯ ಪೂಜೆ ಜರುಗಿತು. ಸಂಜೆ 7ಗಂಟೆಗೆ ಮಹಾ ಪೂಜಾ ಸೇವೆ ಜರುಗಿತು.
ನಂತರ ಚಂಡೆ ಮೇಳದೊಂದಿಗೆ ಉತ್ಸವ ಮೂರ್ತಿಯ ದೇವಾಲಯದ ಸುತ್ತ ನೃತ್ಯ ಪ್ರದಕ್ಷಿಣೆ ನಡೆಯಿತು.
*ಇಲ್ಲಿನ ಜೈನರ ಬೀದಿ ಯಲ್ಲಿರುವ ಬಸವೇಶ್ವರ ದೇವಾಲಯದಲ್ಲಿಯೂ ಮಕರ ಸಂಕ್ರಾಂತಿಯನ್ನು ಆಚರಿಸ ಲಾಯಿತು. ಮಕರ ಸಂಕ್ರಾಂತಿಯ ಅಂಗವಾಗಿ ಬೆಳಗಿನಿಂದಲೇ ಸಾಂಪ್ರದಾಯಿಕ ಪೂಜೆಗಳು ಜರುಗಿದವು. ವಿಶೇಷವಾಗಿ ಬಸವೇಶ್ವರನಿಗೆ ಅಭಿಷೇಕ, ವಿಶೇಷ ಪೂಜೆಗಳು, ರಾತ್ರಿ ಮಹಾಪೂಜಾ ಸೇವೆ ಜರುಗಿದವು.