ಸೋಮವಾರಪೇಟೆ,ಜ.15: ಕಾಂಗ್ರೆಸ್‍ನ ದುರಾಡಳಿತಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದು, ಜಾತ್ಯತೀತ ಜನತಾದಳ ಕಿಂಗ್‍ಮೇಕರ್ ಆಗುವ ಕನಸು ಭಗ್ನವಾಗಲಿದ್ದು, ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಭಾರತೀಯ ಯುವ ಮೋರ್ಚಾ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಯುವ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚುವದರೊಂದಿಗೆ ಆ ಪಕ್ಷಕ್ಕೆ ಇದೇ ಕೊನೆಯ ಚುನಾವಣೆಯಾಗಲಿದೆ ಎಂದು ಭವಿಷ್ಯ ನುಡಿದ ಸದಾನಂದಗೌಡ, ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತಿರುವ, ಉಗ್ರವಾದಿ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಭಿವೃದ್ಧಿ ವಂಚಿತ ಕರ್ನಾಟಕವಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ತಂದಂತಹ ಭಾಗ್ಯಲಕ್ಷ್ಮೀ, ವಿವಿಧ ಪಿಂಚಣಿ ಯೋಜನೆಗಳನ್ನು ಕಾಂಗ್ರೆಸ್ ಸ್ಥಗಿತಗೊಳಿಸಿದೆ. ಕರ್ನಾಟಕ ರಾಜಕೀಯ ಹೊಸ ದಿಕ್ಕು ತೋರುವ ಕಾಲ ಸನ್ನಿಹಿತವಾಗುತ್ತಿದ್ದು, ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರುತ್ತಿದೆ ಎಂದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರ ದೇಶದ ಘನತೆಯನ್ನು ಜಗತ್ತಿನಾದ್ಯಂತ ಎತ್ತಿಹಿಡಿದಿದೆ. ಶತ್ರು ರಾಷ್ಟ್ರಗಳಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದೆ.

(ಮೊದಲ ಪುಟದಿಂದ) ದೇಶಾದ್ಯಂತ ಸಮಾನ ತೆರಿಗೆ ಪದ್ಧತಿಯೊಂದಿಗೆ ನೋಟ್ ಬ್ಯಾನ್ ಮೂಲಕ ಕಪ್ಪುಹಣದ ವಿರುದ್ಧ ಸಮರ ಸಾರಿದೆ. ಆರ್ಥಿಕ ಶಿಸ್ತುಬದ್ಧ ದೇಶವಾಗಿ ಭಾರತ ಮುನ್ನುಗ್ಗುತ್ತಿದ್ದು, ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದೇ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು.

ಅರ್ಥವಿಲ್ಲದ ಸಾಧನಾ ಸಮಾವೇಶ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೊಡಗಿನಲ್ಲಿ ಸಿದ್ದರಾಮಯ್ಯ ಅವರು ಮಾಡಿರುವ ಸಾಧನಾ ಸಮಾವೇಶಕ್ಕೆ ಅರ್ಥವೇ ಇಲ್ಲ. ಟಿಪ್ಪು ಜಯಂತಿ ಮೂಲಕ ಕೊಡಗಿನವರ ಭಾವನೆಗಳಿಗೆ ಧಕ್ಕೆ ತಂದಿದ್ದೂ ಅಲ್ಲದೇ ಈರ್ವರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಸರ್ಕಾರ ಇಲ್ಲಿ ಬಂದು ಸಾಧನಾ ಸಮಾವೇಶ ಮಾಡಿರುವದು ಖಂಡನೀಯ ಎಂದರು.

ಕೊಡಗಿನವರ ಹತ್ಯೆ, ಮತಾಂತರ ಮಾಡಿಸಿದ ಟಿಪ್ಪುವಿನ ಜಯಂತಿ ಮಾಡಿದ ಸಿದ್ದರಾಮಯ್ಯ ಅವರನ್ನು ಕೊಡಗಿನಲ್ಲಿ ಯಾವೊಬ್ಬ ಕಾಂಗ್ರೆಸ್ಸಿಗರೂ ಪ್ರಶ್ನಿಸದಿರುವದು ದುರಂತ. ಕೊಡಗಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡಿದ್ದರೂ ಸಹಿಸಿಕೊಂಡಿರುವದು ಸರಿಯಲ್ಲ ಎಂದ ಪ್ರತಾಪ್, ಕೊಡಗಿನ ಕುಟ್ಟಪ್ಪ, ಪ್ರವೀಣ್ ಪೂಜಾರಿ ಸೇರಿದಂತೆ ರಾಜ್ಯಾದ್ಯಂತ 21 ಮಂದಿ ಹಿಂದೂ ಸಮುದಾಯದ ಮುಖಂಡರ ಹತ್ಯೆ ಮಾಡಿದವರಿಗೆ ನೆರವಾಗಿದ್ದೇ ಕಾಂಗ್ರೆಸ್ ಸಾಧನೆ ಎಂದು ವ್ಯಂಗ್ಯವಾಡಿದರು. ಕೊಡಗಿನ ಈರ್ವರು ಶಾಸಕದ್ವಯರು ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಹಲವಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಳೇಜು, ಸ್ನಾತಕ್ಕೋತ್ತರ ಕೇಂದ್ರ, ಅರೆಭಾಷೆ ಅಕಾಡೆಮಿ ಸ್ಥಾಪನೆ, ಸೈನಿಕ ಶಾಲೆ, ಕೊಡವ ಹಾಕಿ ನಮ್ಮೆಗೆ ಸರ್ಕಾರಿ ಅನುದಾನ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ 1800 ಕೋಟಿ ಅನುದಾನ ಒದಗಿಸಿದ್ದಾರೆ. ಈಗಿನ ಸರ್ಕಾರ ಯಾವ ಕೊಡಗೆ ನೀಡಿದೆ? ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಪ್ರತಾಪ್, ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪವನ್ನು ಕಾರ್ಯಕರ್ತರು ಸ್ವೀಕರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜೆಡಿಎಸ್‍ನಿಂದ ಬಿಜೆಪಿ ಸೇರ್ಪಡೆಗೊಂಡ ವಿ.ಎಂ. ವಿಜಯ, ಭರತ್‍ಕುಮಾರ್ ಎನ್.ಆರ್. ಅಜೀಶ್ ಕುಮಾರ್ ಅವರುಗಳು ಮಾತನಾಡಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಪ್ಪಣ್ಣ, ಕಿಬ್ಬೆಟ್ಟ ಮಧು, ಶ್ರೀಕಾಂತ್ ಮುತ್ತಣ್ಣ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಕ್ಷೇತ್ರ ಸಮಿತಿ ಅಧ್ಯಕ್ಷ ಕೊಮಾರಪ್ಪ, ಕಾರ್ಯದರ್ಶಿ ಮನುಕುಮಾರ್ ರೈ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಸತೀಶ್, ಜಿಲ್ಲಾ ಉಸ್ತುವಾರಿ ಅಚ್ಚಪ್ಪ, ವೀರಾಜಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸೇರಿದಂತೆ ಇತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.