ಶನಿವಾರಸಂತೆ ಸಮೀಪದ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ಇಂದು ನಡೆಯಲಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಮಾರನೇ ದಿನ ನಡೆಯುವ ಈ ಜಾತ್ರೆಗೆ ಶತಮಾನದ ಇತಿಹಾಸವಿದೆ.ಇಲ್ಲಿ ಭಕ್ತಾದಿಗಳ ಹರಕೆ ಈಡೇರುತ್ತದೆ ಎಂಬ ನಂಬಿಕೆಯೂ ಜನಮನದಲ್ಲಿದೆ. ಹಾಗಾಗಿಯೇ ಜಾತ್ರೆಗೆ ಶನಿವಾರಸಂತೆ, ಕೊಡ್ಲಿಪೇಟೆ, ಯಳಸೂರು ಕಡೆಯಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಐತಿಹಾಸಿಕ ಹಿನ್ನಲೆ : ಗ್ರಾಮದ ಬಾಣಂತಮ್ಮ ದೇವಿಗೆ ಏಳುಮಂದಿ ಗಂಡುಮಕ್ಕಳು ಬಾಣಂತಮ್ಮ ದೇವಿಯ ಪತಿ ಗೋಪಾಲಕೃಷ್ಣ ದೇವರನ್ನು ಶನಿವಾರಸಂತೆ ಸಮೀಪದ ಕೆರೆಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ. 7ಜನ ಮಕ್ಕಳಲ್ಲಿ ಹಿರಿಯವ ದೊಡ್ಡಯ್ಯ ಕೊಂಗಳ್ಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ನಂತರ ದೊಡ್ಡಯ್ಯನ ಜಾತ್ರೆ ನಡೆಯುತ್ತದೆ. 2ನೇ ಮಗ ಕುಮಾರಲಿಂಗೇಶ್ವರ ಸ್ವಾಮಿಯನ್ನು ಶಾಂತಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಅಲ್ಲಿಯೂ ಜಾತ್ರೆ ನಡೆಯುತ್ತದೆ.

3,4,5 ಹಾಗೂ 6ನೇ ಮಗಂದಿರನ್ನು ಹುಲುಕೋಡು, ದೊಡ್ಡಕುಂದೂರು, ಹೆತ್ತೂರು, ಕಿತ್ತೂರು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷ ಅಲ್ಲಿಯೂ ಹುಲುಗೋಡಯ್ಯ, ಒಬ್ಬೆ ಕುಮಾರಲಿಂಗೇಶ್ವರ ಮತ್ತು ಕುಮಾರಲಿಂಗೇಶ್ವರ ಹೆಸರಿನಲ್ಲಿ ಜಾತ್ರೆಗಳು ನಡೆಯುತ್ತದೆ. ಕೊನೆಯ ಮಗನೇ ಕುಂಟ ಕುಮಾರಲಿಂಗೇಶ್ವರ, ಈತನೂ ತನ್ನನ್ನು ತೊರೆದು ಬೇರೆಡೆಗೆ ಹೋಗುತ್ತಾನೆ ಎಂದು ಭಾವಿಸಿ ತಾಯಿ ಬಾಣಂತಮ್ಮ ದೇವಿ ಕಳ್ಳ್ಳಿ ದೊಣ್ಣೆಯಿಂದ ಮಗನ ಕಾಲಿಗೆ ಹೊಡೆದು ಒಂದು ಕಾಲನ್ನು ಮುರಿದು ಕೂರಿಸಿದಳೆನ್ನಲಾಗಿದೆ. ತಾನು ಬೆಂಬಳೂರು ಗ್ರಾಮದಲ್ಲಿ ಉಳಿದರೆ ತನಗೇನು ಕೊಡುವೆ ಎಂದು ಮಗ ತಾಯಿಯನ್ನು ಪ್ರಶ್ನಿಸಿದಾಗ, ತಾಯಿ ಪ್ರತಿವರ್ಷ ಮಕರ ಸಂಕ್ರಾಂತಿಯ ಮರುದಿನ ನಡೆಯುವ ಜಾತ್ರೆಯಲ್ಲಿ ಒಪ್ಪೊತ್ತಿನ ಜಾತ್ರೆಯನ್ನು ಬಿಟ್ಟು ಕೊಡುವುದಾಗಿ ಮಾತು ಕೊಟ್ಟಳಂತೆ . ಅದರಂತೆ ಪ್ರತಿವರ್ಷ ಮಕರ ಸಂಕ್ರಾಂತಿಯ ಮಾರನೇ ದಿನ ಜಾತ್ರೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಬಾಣಂತಮ್ಮ ಹೆಸರಿನಲ್ಲಿ ಜಾತ್ರೆ ನಡೆದರೆ ಮಧ್ಯಾಹ್ನದ ನಂತರ ಕುಂಟ ಮಗ ಕುಮಾರಲಿಂಗೇಶ್ವರನ ಹೆಸರಿನಲ್ಲಿ ಜಾತ್ರೆ ನಡೆದು ಕುಮಾರಲಿಂಗೇಶ್ವರನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಕುಂಟುತ್ತಲೆ ಮೆರವಣಿಗೆ ತರಲಾಗುತ್ತದೆ.

ಬೆಂಬಳೂರು ಗ್ರಾಮ ಗೌಡನ ಮನೆ ಕಲ್ಲೇಗೌಡರು ತೋರಿಸಿದ ದೊಡ್ಡಕೆÉರೆಯಲ್ಲಿ ನೀರು ಬಾರದಿದ್ದಾಗ ಬಾಣಂತಮ್ಮ ದೇವಿಯ ಪೂಜಿಸಲಾಗಿ ಕೆರೆ ನೀರಿನಿಂದ ತುಂಬಿ ತುಳಿಕಿದಂತೆ, ಆಂದಿನಿಂದ ಬಾಣಂತಮ್ಮ ಇಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಜಾತ್ರೆಯ ಪೂಜಾ ಕಾರ್ಯಕ್ರಮಗಳು ಸಂಕ್ರಾಂತಿ ಹಬ್ಬದ ಕರುವಿನ ಹಬ್ಬದೊಂದಿಗೆ ಪ್ರಾರಂಭವಾಗುತ್ತದೆ.

ಇಂದು ಬೆಳಿಗ್ಗೆ 9 ಗಂಟೆಗೆ ಬಾಣಂತಮ್ಮ ದೇವಿಯ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಜಾತ್ರಾ ಮೈದಾನಕ್ಕೆ ಕೊಂಡೊಯ್ದು ಭಕ್ತಾದಿಗಳಿಂದ ಪೂಜಾ ವಿಧಿವಿಧಾನಗಳು ನಡೆಯುವವು. ಹಿಂದಿನ ದಿನ ಮಡೆಗಾಗಿ ಸ್ವೀಕರಿಸಿದ ಪದಾರ್ಥಗಳಿಂದ ತಯಾರಿಸಿದ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗುವದು. ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿಯೊಂದಿಗೆ ಬಾಣಂತಮ್ಮ ಜಾತ್ರೆ ಮುಕ್ತಾಯವಾಗುತ್ತದೆ. ದೇವಿಯ ಅಡ್ಡ ಪಲ್ಲಕ್ಕಿಯನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನದ ನಂತರ 2ಗಂಟೆಗೆ ಮಗ ಕುಮಾರಲಿಂಗೇಶ್ವರ ದೇವರನ್ನು ದೇವಾಲಯದಿಂದ ಮೆರವಣಿಗೆಯಲ್ಲಿ ಜಾತ್ರಾ ಮೈದಾನಕ್ಕೆ ಕೊಂಡೊಯ್ದು ಭಕ್ತಾಧಿಗಳಿಂದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವದು, ಸಂಜೆ 5 ಗಂಟೆಗೆ ಜಾತ್ರೆ ಮುಕ್ತಾಯವಾಗುತ್ತದೆ.