ಕುಶಾಲನಗರ, ಜ. 15: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ತಾ. 31 ರಂದು ನಡೆಸಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದ್ದಾರೆ.
ಮಡಿಕೇರಿ ಕೋಟೆ ಆವರಣದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸುವಂತೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನದ ಅಧ್ಯಕ್ಷರನ್ನಾಗಿ ವಿ.ಡಿ.ಸಿಂಚನ ಆಯ್ಕೆ ಮಾಡಲಾಯಿತು.
ಮುಖ್ಯ ಭಾಷಣಕಾರರಾಗಿ ಮಡಿಕೇರಿಯ ವಿ.ಜೆ. ಮೌನ ಭಾಗವಹಿಸಲಿದ್ದಾಳೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೃತಜ್ಞಾ ಬೆಸ್ಸೂರು, ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಸೋಮವಾರಪೇಟೆಯ ಎಸ್.ಎಂ.ನಿಮಿಷ, ಗೀತಗಾಯನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತನ್ವಿತಾ ಶೆಟ್ಟಿ ವಹಿಸಲಿದ್ದು, ಧ್ವಜವಂದನೆಯನ್ನು ಸೋಮವಾರಪೇಟೆಯ ಪ್ರಣವ್ ಕಶ್ಯಪ್ ಸ್ವೀಕರಿಸಲಿದ್ದಾರೆ. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.
ಸಭೆಯಲ್ಲಿ ಕೋಶಾಧಿಕಾರಿ ಮುರಳೀಧರ. ಮಾಧ್ಯಮ ಕಾರ್ಯದರ್ಶಿ ಅಶ್ವಥ್ ಕುಮಾರ್, ನಿರ್ದೇಶಕರಾದ ಕವನ್ ಕಾರ್ಯಪ್ಪ, ಫಿಲಿಪ್ ವಾಸ್, ಕೆ.ಆರ್.ಬಾಲಕೃಷ್ಣ ರೈ, ಪ್ರಸನ್ನ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಇದ್ದರು.