ಸೋಮವಾರಪೇಟೆ, ಜ. 10: ಮಡಿಕೇರಿಯ ಹೊಟೇಲ್ ವ್ಯಾಲಿ ವ್ಯೂನಲ್ಲಿ ಮೊನ್ನೆ ನಡೆದ ಜೆಡಿಎಸ್ ಅತೃಪ್ತರ ಸಭೆಗೂ ಜೆಡಿಎಸ್ ಪಕ್ಷಕ್ಕೂ ಯಾವದೇ ಸಂಬಂಧವಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜೀ ಸಚಿವ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಬಿ.ಎ. ಜೀವಿಜಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಸಭೆಯ ಬಗ್ಗೆ ತಾನು ಯಾವದೇ ಟೀಕೆ, ಟಿಪ್ಪಣಿ ಮಾಡುವದಿಲ್ಲ. ‘ನ್ಯೂಟ್ರಲ್ ಜೆಡಿಎಸ್’ನವರು ಎಂದು ಕೆಲವರು ಹೇಳಿಕೊಳ್ಳುತ್ತಿದ್ದು, ಆ ಜೆಡಿಎಸ್‍ಗೂ ನಮ್ಮ ಜಾತ್ಯತೀತ ಜನತಾದಳಕ್ಕೂ ಯಾವದೇ ಸಂಬಂಧವಿಲ್ಲ ಎಂದರು.
ಸಭೆ ನಡೆಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅವರುಗಳು ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಿಸಿದ ಜೀವಿಜಯ ಅವರು, ಈ ಬಾರಿಯ ಚುನಾವಣೆಯಲ್ಲಿ ಜೀವಿಜಯ ಅವರನ್ನು ಪರಾಭವಗೊಳಿಸುವ ಬಗ್ಗೆ ಚರ್ಚೆಗಳು ನಡೆದಿರುವ ಬಗ್ಗೆ ಉಲ್ಲೇಖಿಸಿ, ಹಾಗಾದರೆ ಅವರುಗಳು ಬಿಜೆಪಿಯವರನ್ನು ಗೆಲ್ಲಿಸುತ್ತಾರಾ? ಎಂಬದನ್ನು ಸ್ಪಷ್ಟಪಡಿಸಲಿ ಎಂದರು.
(ಮೊದಲ ಪುಟದಿಂದ) ಮಾಜೀ ಸಚಿವ, ಹಿರಿಯ ರಾಜಕಾರಣಿ ಯಂ.ಸಿ. ನಾಣಯ್ಯ ಅವರನ್ನು ಕಡೆಗಣಿಸುತ್ತಿರುವ ಬಗ್ಗೆ ಕೇಳಿಬಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಜೀವಿಜಯ, ಯಂ.ಸಿ. ನಾಣಯ್ಯ ಅವರು ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣಿ, ಅವರನ್ನು ಕಡೆಗಣಿಸುವ ಕೆಲಸ ಮಾಡಿಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಮಾತ್ರ. ಅಂತಹ ರಾಜಕಾರಣಿಯನ್ನು ನನ್ನಿಂದ ಕಡೆಗಣಿಸಲು ಸಾಧ್ಯವೇ? ಅಂತಹ ಪ್ರಶ್ನೆಯೇ ಇಲ್ಲ ಎಂದರು.