ಸೋಮವಾರಪೇಟೆ, ಜ. 10: ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದೊಂದಿಗೆ, ಸೋಮವಾರಪೇಟೆ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ತಾ. 12 ರಂದು ಕೂಡಿಗೆಯಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ-ಸಾಂಸ್ಕøತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್ ಹೇಳಿದರು.

ಪತ್ರಿಕಾಗೊಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೂಡಿಗೆಯ ಡಯಟ್ ಹಾಗೂ ಕ್ರೀಡಾ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪುರುಷರ ವಿಭಾಗದಲ್ಲಿ 45ವರ್ಷ ಒಳಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಮತ್ತು ಮಹಿಳೆಯರ ವಿಭಾಗದಲ್ಲಿ 40ವರ್ಷ ಒಳಪಟ್ಟವರಿಗೆ ಹಾಗೂ 40ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.

ಓಟ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ರಿಲೆ, ತಟ್ಟೆ ಎಸೆತ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿದೆ ಎಂದು ತಿಳಿಸಿದರು.

ಸಾಂಸ್ಕøತಿಕ ಸ್ಪರ್ಧೆಯಲ್ಲಿ ಹಿಂದೂಸ್ಥಾನಿ ಸಂಗೀತ, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ವಾದ್ಯ ಸಂಗೀತ ಸ್ಪರ್ಧೆ ನಡೆಯಲಿದೆ. ಕಿರುನಾಟಕ, ಸಂಗೀತ, ಕರಕುಶಲ ವಸ್ತುಗಳ ಪ್ರದರ್ಶನ, ಜಾನಪದ ಗೀತೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ. ಕೇರಂ, ಚೆಸ್ ಮತ್ತು ಈಜು ಸ್ಪರ್ಧೆಗಳು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು.

ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವÀ ಎಂ.ಆರ್. ಸೀತಾರಾಮ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಎಚ್.ಆರ್. ದಿನೇಶ್, ಐಎನ್‍ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3-30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸರಕಾರಿ ನೌಕಕರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ರವಿ ವಹಿಸಲಿದ್ದಾರೆ ಎಂದರು.

ಅಂದು ಬೆಳಿಗ್ಗೆ 9.30ಕ್ಕೆ ಕೂಡಿಗೆ ಕ್ರೀಡಾ ಮೈದಾನದಲ್ಲಿ ಪಥ ಸಂಚಲನ ನಡೆಯಲಿದ್ದು, ಇದರಲ್ಲಿ ಎಲ್ಲಾ ಸರಕಾರಿ ನೌಕರರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ ಅವರು, ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಸರಕಾರಿ ನೌಕರರಿಗೆ ಓಓಡಿ ಸೌಲಭ್ಯ ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪ್ರದೀಪ್, ಕ್ರೀಡಾ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಎಂ. ಗಣೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಎಚ್.ಎಸ್. ರಾಜಪ್ಪ, ಗೌರವಾಧ್ಯಕ್ಷ ಎಸ್.ಎ. ಯೋಗೇಶ್ ಉಪಸ್ಥಿತರಿದ್ದರು.