ವೀರಾಜಪೇಟೆ, ಜ. 10: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ ದೂರಿನ ಮೇರೆ ವಿಚಾರಣೆಗೆ ಬಂದಿದ್ದ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುಧಾಕರ್ ಎಂಬವರಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆ ಇಲ್ಲಿನ ಅಪರ ಜಿಲ್ಲಾ ಮತ್ತು ಎರಡನೇ ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಆರೋಪಿ ಕರ್ತಮಾಡ ತಿಮ್ಮಯ್ಯ ಅಲಿಯಾಸ್ ರತನ್ ಎಂಬಾತನಿಗೆ ಹತ್ತು ವರ್ಷಗಳ ಸಜೆ, ರೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ 10-1-2015ರಂದು ಮಧ್ಯ ರಾತ್ರಿ 12-30 ರ ಸಮಯದಲ್ಲಿ ಸಾರ್ವಜನಿಕ ದೂರಿನ ಮೇರೆ ಬಿರುನಾಣಿ ಗ್ರಾಮದ ತನ್ನ ಮನೆಯ ಬಳಿಯಲ್ಲಿಯೇ ಮದ್ಯ ಸೇವಿಸಿ ಆಜು ಬಾಜುದಾರರಿಗೆ ಕತ್ತಿ ಹಿಡಿದು ಬೊಬ್ಬೆ ಹಾಕಿ ಕಿರುಕುಳ ನೀಡುತ್ತಿದ್ದುದರ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ರಾತ್ರಿಯೇ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಸುಧಾಕರ್ ಬಿರುನಾಣಿಯ ತಿಮ್ಮಯ್ಯನ ಮನೆಗೆ ತೆರಳಿ ತಿಮ್ಮಯ್ಯನನ್ನು ವಿಚಾರಿಸುತ್ತಿದ್ದ ಸಮಯದಲ್ಲಿ ತಿಮ್ಮಯ್ಯ ಏಕಾ ಏಕಿಯಾಗಿ ಸುಧಾಕರ್ ತಲೆ, ಕೈ, ಕಾಲು ಮುಖಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಗಂಭೀರ ರೀತಿಯ ಗಾಯಗೊಂಡ ಸುಧಾಕರನನ್ನು ಚಿಂತಾಜನಕ ಸ್ಥಿತಿಯಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಸುಧಾಕರನ ಜೊತೆಯಲ್ಲಿ ಪೊಲೀಸ್ ಕಾನ್ಸ್‍ಟೇಬಲ್ ಕೆ.ಯು.ಶರತ್ ಕತ್ತಿ ಕಡಿತ ತಡೆಯಲು ವಿಫಲಗೊಂಡರೆನ್ನಲಾಗಿದೆ.

ಆರೋಪಿ ತಿಮ್ಮಯ್ಯನ ಮೇಲೆ ಈ ಹಿಂದೆಯೂ ಪೊಲೀಸ್ ಠಾಣೆಯಲ್ಲಿ ದೂರುಗಳಿದ್ದವು. ಶ್ರೀಮಂಗಲ ಪೊಲೀಸ್ ಠಾಣೆಯಿಂದ ಪೊಲೀಸರು ಬರುವಷ್ಟರಲ್ಲಿ ತಿಮ್ಮಯ್ಯ ಕತ್ತಿಯನ್ನು ಸ್ಥಳದಲ್ಲಿಯೇ ಬೀಸಾಕಿ ಸಮೀಪದ ತೇರಾಲು ಗ್ರಾಮದ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದವನನ್ನು ತಾ:3-1-15 ರಂದುÀ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಪೊಲೀಸ್ ಶರತ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಾ:11-1-15 ರಂದು ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಅವರಿಗೆ ನಡೆದ ಘಟನೆಯನ್ನು ವಿವರಿಸಿ ಲಿಖಿತ ದೂರು ನೀಡಿದ ಮೇರೆ ತಿಮ್ಮಯ್ಯನ ವಿರುದ್ಧ ಶ್ರೀಮಂಗಲ ಪೊಲೀಸರು ಐ.ಪಿ.ಸಿ 1800,332, 307, 353 ಪ್ರಕಾರ ಕೊಲೆ ಯತ್ನದ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ್ ಪ್ರಭು ಅವರು ಐ.ಪಿ.ಸಿ 307ಕ್ಕೆ 10 ವರ್ಷ ಸಜೆ, ರೂ10.000 ದಂಡ, ಐಪಿ.ಸಿ 333ಕ್ಕೆ 7ವರ್ಷ ಸಜೆ ರೂ 5000 ದಂಡ, ಐಪಿ.ಸಿ 353ಕ್ಕೆ 1ವರ್ಷ ಸಜೆ ರೂ 1000 ದಂಡ, ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಪೈಕಿ ಗಾಯಾಳುವಿಗೆ ರೂ 10,000 ನಗದುಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ನ್ಯಾಯಾಧೀಶರು, ಪೊಲೀಸರು ನಮೂದಿಸಿದ ಸಾಕ್ಷಿಯೊಂದಿಗೆ ತಿಮ್ಮಯ್ಯನ ತಾಯಿ ಹಾಗೂ ದಿವಂಗತ ಬೋಪಯ್ಯ ಅವರ ಪತ್ನಿ ಮಾಚಮ್ಮ, ಗಾಯಾಳು ಸುಧಾಕರ ಅವರ ಪತ್ನಿ ಯಶೋಧ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಿದ್ದಾರೆ. ಸುಧಾಕರ್‍ಗೆ ಮುಖಕ್ಕೆ ಬಿದ್ದ ಕತ್ತಿ ಏಟಿನಿಂದ ಇಂದಿಗೂ ಮಾತನಾಡಲು ಸಾಧ್ಯವಾಗದಿದ್ದು ಸುಧಾಕರನಿಗೆ ನ್ಯಾಯಾಧೀಶರ ಮುಂದೆ ಸಾಕ್ಷಿ ಹೇಳಲು ಸಾಧ್ಯವಾಗಿಲ್ಲ ಎಂದು ಪತ್ನಿ ಯಶೋದ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.

ಸರಕಾರದ ಪರ ಅಭಿಯೋಜಕ ಮಹಾಂತಪ್ಪ ವಾದಿಸಿದರು.