ಮಡಿಕೇರಿ, ಜ. 10: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತರತ್ನ ಗೌರವ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡುವದಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.ನಿನ್ನೆ ದಿನ ಮಡಿಕೇರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇಂದು ಹಿಂತಿರುಗುವ ಸಂದರ್ಭ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಭೂಗತ ಪಾತಕಿ ರವಿ ಪೂಜಾರಿಯಿಂದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಕರೆ ಬಂದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಅದು ಸುಳ್ಳು ಕರೆಯೋ ಅಥವಾ ಏನು ಎಂಬದರ ಬಗ್ಗೆ ತನಿಖೆ ಮಾಡಲಾಗುತ್ತ್ತದೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿನಲ್ಲಿ ರೆಸಾರ್ಟ್‍ವೊಂದಕ್ಕೆ ಬಂದಾಗ ನಾಗರಹಾವು ಎದುರಾದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ತಾನು ಆ ಬಗ್ಗೆ ಯಾವದೇ ಪ್ರತಿಕ್ರಿಯೆ ನೀಡುವದಿಲ್ಲ. ಹಾವು ಎದುರಾದದ್ದು, ಶುಭವೊ ಅಶುಭವೋ ಗೊತ್ತಿಲ್ಲ. ನನಗೆ ಅದರ ಬಗ್ಗೆ ನಂಬಿಕೆಯಿಲ್ಲ ಎಂದರು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ರೂಪಿಸಿರುವ 23 ಸೂತ್ರದ ಬಗ್ಗೆ ಕುಟುಕಿದ ಸಿಎಂ, ಅಮಿತ್ ಷಾ ಅವರ ಆಟ ಕರ್ನಾಟಕದಲ್ಲಿ ನಡೆಯುವದಿಲ್ಲ. ಇದು ಉತ್ತರ ಪ್ರದೇಶವಲ್ಲ

(ಮೊದಲ ಪುಟದಿಂದ) ಎಂದರು ತಾನು ಉತ್ತರಪ್ರದೇಶ ಮುಖ್ಯಮಂತ್ರಿಗೆ ಯಾವದೇ ಪ್ರಾಮುಖ್ಯತೆ ನೀಡುತ್ತಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ಉಸ್ತುವಾರಿ ಸಚಿವ ಸೀತಾರಾಂ, ಎಂಎಲ್‍ಸಿ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮತ್ತಿತರರು ಇದ್ದರು.