ಮಡಿಕೇರಿ, ಜ. 10: ಕೇಂದ್ರ ರೈಲ್ವೇ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ಅವರ ಪ್ರಯತ್ನದಿಂದ ಕೊಡಗಿನ ಕುಶಾಲನಗರ ತನಕ ರೈಲ್ವೇ ಯೋಜನೆಗೆ ಪ್ರಸ್ತಾಪಗೊಂಡಿದ್ದು, ಈಗಾಗಲೇ ಮಾರ್ಗದ ಸಮೀಕ್ಷೆ ನಡೆದಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ನಿನ್ನೆ ನಡೆದಿರುವ ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಮಾಜೀ ಕೇಂದ್ರ ರೈಲ್ವೇ ಸಚಿವ ಹಾಗೂ ಸಂಸದ ಕೆ.ಹೆಚ್. ಮುನಿಯಪ್ಪ ಕೂಡ ಈ ಬಗ್ಗೆ ಉಲ್ಲೇಖಿಸಿರುವದನ್ನು ಬೋಪಯ್ಯ ಅವರು ಬೊಟ್ಟು ಮಾಡಿದ್ದು, ಕಾಂಗ್ರೆಸ್ ಸಂಸದರ ಹೇಳಿಕೆಯು ಸಂಶಯ ಹುಟ್ಟುಹಾಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈಚೆಗೆ ಕೊಡಗಿನ ಕುಶಾಲನಗರ ತನಕ ರೈಲ್ವೇ ಯೋಜನೆಗೆ ರಾಜ್ಯ ಸರಕಾರ ಜಾಗ ಮಂಜೂರಾತಿಯೊಂದಿಗೆ ಪಾಲು ಹಣವನ್ನು ಒದಗಿಸದಿರುವ ಕುರಿತು ಪ್ರಸ್ತಾಪಗೊಂಡ ವೇಳೆ, ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿಕೆ ನೀಡಿ, ಯಾವ ಕಾರಣಕ್ಕೂ ರಾಜ್ಯ ಸರಕಾರ ಕುಶಾಲನಗರ ತನಕ ರೈಲ್ವೇ ಯೋಜನೆಗೆ ಅವಕಾಶ ಕಲ್ಪಿಸುವದಿಲ್ಲವೆಂದು ಘೋಷಿಸಿದ್ದಾರೆ.
ಅಲ್ಲದೆ ಕುಶಾಲನಗರ ತನಕ ರೈಲ್ವೇ ಯೋಜನೆಯನ್ನು ವಿರೋಧಿಸುವದಾಗಿ ಹೇಳಿಕೆ ನೀಡಿದ್ದಾರೆ ಎಂದು ನೆನಪಿಸಿದ ಬೋಪಯ್ಯ, ಈ ದ್ವಂಧ್ವ ಹೇಳಿಕೆಗಳು ಕೊಡಗಿನ ಜನತೆಯಲ್ಲಿ ಗೊಂದಲ ಸೃಷ್ಟಿಸಿರುವ ಕಾರಣ, ಜಿಲ್ಲೆಯ ಕಾಂಗ್ರೆಸ್ ಪಕ್ಷ ಅಥವಾ ಮುಖಂಡರು ರೈಲ್ವೇ ಯೋಜನೆ ಬಗ್ಗೆ ಸ್ಪಷ್ಟ ನಿಲುವನ್ನು ಜನರಿಗೆ ತಿಳಿಸಬೇಕೆಂದು ಆಗ್ರಹಪಡಿಸಿದ್ದಾರೆ.