ಮಡಿಕೇರಿ ,ಜ.10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿಗೆ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಿಎಂಗೆ ನೀಡಿದ್ದರು. ಆದರೆ ಈ ಮನವಿ ಪತ್ರದಲ್ಲಿ ದಲಿತ ಸಮುದಾಯದ ಒಂದೇ ಒಂದು ಬೇಡಿಕೆಯನ್ನು ಪ್ರಸ್ತಾಪಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷ ದಲಿತರನ್ನು ಮತಗಳಿಕೆಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಆರೋಪಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು ತಾ. 9 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ಜಿಲ್ಲೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ಆದರೆ ಈ ಮನವಿ ಪತ್ರದಲ್ಲಿ ದಲಿತರಿಗೆ ಸಂಬಂಧಿಸಿದ ಯಾವದೇ ಬೇಡಿಕೆ ಇಲ್ಲದೆ ಇರುವದನ್ನು ತಾವು ಖಂಡಿಸುವದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 1.30 ಲಕ್ಷ ಮಂದಿ ದಲಿತರು ವಾಸಿಸುತ್ತಿದ್ದಾರೆ. ಇಷ್ಟು ದೊಡ್ಡ ಸಮುದಾಯ ಯಾವದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲವೇ ಅಥವಾ ಯಾವದೇ ಹಕ್ಕುಗಳು ನಮಗೆ ಇಲ್ಲವೆ ಎಂದು ಪ್ರಶ್ನಿಸಬೇಕಾಗುತ್ತದೆ. ಕಾಂಗ್ರೆಸ್ ದೀನ ದಲಿತರ ಮತ್ತು ಅಹಿಂದ ವರ್ಗದ ಪರವಾದ ಪಕ್ಷ ಎಂದು ಹೇಳಿಕೊಂಡಿದೆ. ಆದರೆ ವಿಧಾನ ಪರಿಷತ್
(ಮೊದಲ ಪುಟದಿಂದ) ಸದಸ್ಯೆ ವೀಣಾಅಚ್ಚಯ್ಯ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಸಭೆಯಲ್ಲಿ ಸಲ್ಲಿಸಿದ ಮನವಿ ಪತ್ರದಲ್ಲಿ ದಲಿತರ ಒಂದೇ ಒಂದು ಬೇಡಿಕೆ ಅಡಕವಾಗಿಲ್ಲ ಎನ್ನುವದು ಬೇಸರದ ವಿಚಾರವಾಗಿದೆ. ಕಾಂಗ್ರೆಸ್ ಸಮಾವೇಶದಲ್ಲಿ ದಲಿತ ಕಾರ್ಯಕರ್ತರೇ ಶೇ.40 ರಷ್ಟು ಹಾಜರಿದ್ದರು.
ಕಾಂಗ್ರೆಸ್ ಸಮಾವೇಶದಲ್ಲಿ ಸಭಿಕರಾಗಿ ಸಭಾಂಗಣದಲ್ಲಿ ಕಾಣಿಸಿಕೊಳ್ಳುವದಕ್ಕೆ ಮತ್ತು ಮತದಾನಕಷ್ಟೇ ದಲಿತರು ಸೀಮಿತವೇ ಎನ್ನುವ ಸಂಶಯ ಮೂಡುತ್ತಿದೆ. ಸಮಾವೇಶದಲ್ಲಿ ಕೊಡಗಿನ ದಲಿತ ನಾಯಕರಿಗೂ ಮಾನ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ. ಏನೇ ನಿರ್ಲಕ್ಷ್ಯ ಮಾಡಿದರೂ ದಲಿತರು ಕಾಂಗ್ರೆಸ್‍ಗೇ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಮುಖಂಡರು ಇರುವಂತಿದೆ. ಆದರೆ ಇಂದು ದಲಿತರು ಪ್ರಜ್ಞಾವಂತರಾಗಿದ್ದು, ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆಯಲು ಬದ್ಧರಾಗಿದ್ದಾರೆ. ದಲಿತರನ್ನು ಕಡೆಗಣಿಸುವ ರಾಜಕೀಯ ಪಕ್ಷಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲು ದಲಿತ ಸಮುದಾಯ ಕಾಯುತ್ತಿದೆ ಎಂದು ದಿವಾಕರ್ ತಿಳಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದಿದ್ದರೂ ಈ ದೇಶವನ್ನು ಸುದೀರ್ಘ ಕಾಲ ಆಳಿದ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಬೇಡಿಕೆಗಳ ಬಗ್ಗೆ ಕಾಳಜಿ ಇಲ್ಲದೆ ಇರುವದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ. ಕಾಂಗ್ರೆಸ್ ಭರ್ಜರಿ ಗೆಲುವಿಗೆ ದಲಿತ ಮತಗಳೇ ನಿರ್ಣಾಯಕವಾಗಿದೆ ಎಂದು ತಿಳಿಸಿರುವ ದಿವಾಕರ್ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ. ಕಾಂಗ್ರೆಸ್‍ನ ಗೆಲುವಿಗೆ ದಲಿತರ ಮತಗಳೇ ನಿರ್ಣಾಯಕ ಎನ್ನುವದನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಸದ್ಯದಲ್ಲಿಯೇ ಬೃಹತ್ ದಲಿತ ಪ್ರತಿಭಟನಾ ಸಭೆ ನಡೆಸಿ ದಲಿತರ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಲಾಗುವದು ಎಂದು ದಿವಾಕರ್ ತಿಳಿಸಿದ್ದಾರೆ.